ಉಡುಪಿಯ ಒಳಕಾಡು ಸರ್ಕಾರಿ ಶಾಲೆಯ ಮಕ್ಕಳಿಗೆ ಯಶ್ಪಾಲ್ ಸುವರ್ಣ ಪಠ್ಯ ಪುಸ್ತಕ ವಿತರಿಸಿದರು. ಶಿಕ್ಷಕಿಯರಾದ ಪೂರ್ಣಿಮಾ, ಕುಸುಮಾ, ಎಸ್ಡಿಎಂಸಿ ಅಧ್ಯಕ್ಷರಾದ ರಮೇಶ್ ಹೆಗಡೆ, ಡಾ. ವಿರೂಪಾಕ್ಷ ಹೆಗಡೆ ಹಾಗೂ ಶಿಕ್ಷಕರು ಇದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕರೆ
* ಒಳಕಾಡು ಶಾಲೆ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ
ಉಡುಪಿ: ಎಲ್ಲ ಮಕ್ಕಳೂ ಸಹ ಸುಶಿತರಾಗಬೇಕೆಂಬ ಕಾರಣದಿಂದ ಸರ್ಕಾರ ಅನೇಕ ಶೈಕ್ಷಣಿಕ ಯೋಜನೆ ಜಾರಿಗೆ ತಂದಿದೆ. ಆರ್ಥಿಕ ಸಮಸ್ಯೆಯಿಂದ ಯಾವ ಮಕ್ಕಳೂ ಸಹ ಶಿಕ್ಷಣದಿಂದ ವಂಚಿತ ಆಗಬಾರದೆಂದು ಉಚಿತವಾಗಿ ಪಠ್ಯ ಪುಸ್ತಕ, ಸಮವಸ್ತ್ರ ಹಾಗೂ ಬಿಸಿಯೂಟ ನೀಡುತ್ತಿದೆ. ಇವುಗಳ ಪ್ರಯೋಜನ ಪಡೆದು ಉತ್ತಮವಾಗಿ ಕಲಿತು ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಕರೆ ನೀಡಿದರು.
ಉಡುಪಿ ತಾಲೂಕಿನ ಒಳಕಾಡಿನಲ್ಲಿರುವ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸೋಮವಾರ (ಜೂ.1) ಆಯೋಜಿಸಿದ್ದ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪಾರಂಭೋತ್ಸವದಲ್ಲಿ ಮಕ್ಕಳನ್ನು ಸ್ವಾಗತಿಸಿ, ಪುಷ್ಪ ನೀಡಿ, ಸಿಹಿ ತಿಂಡಿ ವಿತರಿಸಿ ಶುಭ ಹಾರೈಸಿದರು.
ಶಾಲೆಯ ಆರಂಭದ ದಿನವೇ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಪೂರ್ಣಿಮಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕುಸುಮಾ, ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ್ ಹೆಗಡೆ, ಪ್ರಾಥಮಿಕ ವಿಭಾಗದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ವಿರೂಪಾಕ್ಷ, ಸಮಿತಿಯ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಪಾಲಕ-ಶಿಕ್ಷಕರ ಮಹಾಸಭೆ
ಶಾಲೆಯ ನಳಂದಾ ಸಭಾಭವನದಲ್ಲಿ ಪಾಲಕ-ಶಿಕ್ಷಕರ ಮಹಾಸಭೆ ಹಮ್ಮಿಕೊಳ್ಳಲಾಗಿತ್ತು. ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿದರು. ಸಹ ಶಿಕ್ಷಕಿ ಸುರೇಖಾ ಶೆಣೈ ಶಾಲೆಯ ನಿಯಮಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಕನ್ನಡ ಭಾಷಾ ಶಿಕ್ಷಕಿ ಲಲಿತಾ ಕಾರ್ಯಕ್ರಮ ನಿರೂಪಿಸಿದರು.