ಉಡುಪಿ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಕ್ರಮವನ್ನು ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಡಾ. ಕೆ.ಶ್ರೀಧರ್ ರಂಗನಾಥ್ ಪೈ. ಪ್ರೊ. ಮಂಜುನಾಥ್ ಭಟ್, ಬಿ.ಎಲ್. ವಿಶ್ವಾಸ್, ಶ್ರೀನಿವಾಸ್ ರಾವ್, ಪ್ರಕಾಶ್ ಪ್ರಭು, ರೇವತಿ, ನವನೀತ ಅರಸ್ ಎ. ಇದ್ದರು.
* ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯ
* ಹಿರಿಯಡ್ಕ ಪಬ್ಲಿಕ್ ಸ್ಕೂಲ್ನಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ
ಉಡುಪಿ: ಶಿಕ್ಷಣದ ವ್ಯವಸ್ಥೆಯಲ್ಲಿ ಶಿಷ್ಯರು ತನಗಿಂತ ಎತ್ತರಕ್ಕೆ ಬೆಳೆದಾಗ, ಹೆಚ್ಚಿನ ಮಾನ&ಸನ್ಮಾನ ಪಡೆದಾಗ ಆ ಗುರುವು ತನ್ನ ಬದುಕಿನ ಸಾರ್ಥಕತೆಯಿಂದ ಹಸನ್ಮುಖರಾಗುತ್ತಾರೆ. ಹಾಗೆಯೇ ಪುತ್ರ ಅಥವಾ ಪುತ್ರಿ ಶೈಕ್ಷಣಿಕ ಸಾಧನೆಯಿಂದ ಸನ್ಮಾನಕ್ಕೆ ಪಾತ್ರರಾದಾಗ ತಂದೆ&ತಾಯಿ, ಹಿರಿಯರು ಬದುಕಿನ ಸಾರ್ಥಕತೆಯಿಂದ ಹಸನ್ಮುಖರಾಗುತ್ತಾರೆ. ಮನುಷ್ಯ ಈ ಎರಡು ಸಂದರ್ಭದಲ್ಲಿ ಅತೀವ ಸಂತಸ ಅನುಭವಿಸುತ್ತಾರೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಸಭಾಂಗಣದಲ್ಲಿ ಮಂಗಳವಾರ (ಜೂ.30) ಆಯೋಜಿಸಿದ್ದ ಸನ್ಮಾನ, ಬೀಳ್ಕೊಡುಗೆ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸನ್ಮಾನ, ಬೀಳ್ಕೊಡುಗೆ
ಶಾಲೆಯಿಂದ ನಿವೃತ್ತರಾಗಲಿರುವ ರಸಾಯನ ಶಾಸ್ತ್ರ ಉಪನ್ಯಾಸಕ ನವನೀತ ಅರಸ್ ಎ., ಪ್ರಾಥಮಿಕ ಶಾಲಾ ಶಿಕ್ಷಕಿ ರೇವತಿ ಅವರನ್ನು ಸನ್ಮಾನಿಸಲಾಯಿತು. ವರ್ಗಾವಣೆಗೊಂಡ ದ್ವಿತೀಯ ದರ್ಜೆ ಸಹಾಯಕ ನಿಶ್ಚಲ್ ಕ್ಲಿಂಟನ್ ಸಾಲಿನ್ಸ್ ಅವರನ್ನು ಬೀಳ್ಕೊಡಲಾಯಿತು.
2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ಗಳಿಸಿದ್ದ ಶ್ರೇಯಸ್ ಆಚಾರ್ಯ ಹಾಗೂ ಸಜನಿ ಮತ್ತು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು.
ಎಸ್ಡಿಎಂಸಿ ಉಪಾಧ್ಯಕ್ಷ ಬಿ.ಎಲ್. ವಿಶ್ವಾಸ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್, ಉಪಪ್ರಾಂಶುಪಾಲ ಪ್ರಕಾಶ್ ಪ್ರಭು ಉಪಸ್ಥಿತರಿದ್ದರು.
ಪ್ರಾಂಶುಪಾಲ ಮಂಜುನಾಥ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಜಯಶ್ರೀ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕ ರಮೇಶ್ ನಾಯ್ಕ ವಂದಿಸಿದರು.
"
ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ, ಪಾಲಕರಿಗೆ, ಸಮಾಜದ ಹಿರಿಯರಿಗೆ ಮತ್ತು ಸಹಪಾಠಿಗಳಿಗೂ ಗೌರವ ನೀಡುವ ಗುಣ ಬೆಳಸಿಕೊಳ್ಳಬೇಕು. ದುಶ್ಚಟ, ವ್ಯಸನಗಳಿಗೆ ಬಲಿಯಾಗದೆ ಸಾಧನೆಯನ್ನೇ ಗುರಿಯಾಗಿಸಿಕೊಳ್ಳಬೇಕು.
— ಡಾ. ಕೆ.ಶ್ರೀಧರ್ ರಂಗನಾಥ್ ಪೈ. ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಷನ್ನ ಆಡಳಿತಾಧಿಕಾರಿ.