ಮಂಗಳೂರು: ಸುಳ್ಯ ಆಲೆಟ್ಟಿ ಕುದ್ಕುಳಿಯ ನಿವಾಸಿ ಗಿರೀಶ್ (43) ಎಂಬುವರು ಆ.27ರಂದು ನಾಪತ್ತೆಯಾಗಿದ್ದು, ಅವರ ಶವ ಭಾನುವಾರ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.
ಹುಲ್ಲು ತರಲೆಂದು ಮನೆಯಿಂದ ತೆರಳಿದ್ದ ಅವರು ನಾಪತ್ತೆಯಾಗಿದ್ದರು. ಪಯಸ್ವಿನಿ ನದಿ ಬದಿಯಲ್ಲಿ ಕೊಡೆ ಹಾಗೂ ಕತ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಬಳಸಿ ಎರಡು ದಿನಗಳಿಂದ ಹುಡುಕಾಟ ನಡೆಸಿದ್ದರು. ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಪತ್ತೆ ಸಾಧ್ಯವಾಗಿರಲಿಲ್ಲ.
ಭಾನುವಾರ ಬೆಳಗ್ಗೆ ಸ್ಥಳೀಯರಾದ ಉಲ್ಲಾಸ್ ಕುದ್ಕುಳಿ ಹಾಗೂ ಅಂಬ್ಯುಲೆನ್ಸ್ ಚಾಲಕ ಅಶ್ರಫ್ ನೀರಿಗಿಳಿದು ಹುಡುಕಾಟ ನಡೆಸಿದಾಗ ವಿಶ್ವನಾಥ ಶೆಟ್ಟಿ ಎಂಬವರ ಮನೆಯ ಮುಂದೆ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಗಿರೀಶ್ ಮೂಲತಃ ಪುತ್ತೂರಿನ ಪರ್ಪುಂಜದವರು. ಆಲೆಟ್ಟಿಯ ಕುದ್ಕುಳಿಯ ಗೀತಾ ಅವರನ್ನು ವಿವಾಹವಾದ ಬಳಿಕ ಪತ್ನಿ ಮನೆಯಲ್ಲಿ ವಾಸವಿದ್ದರು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.