ಬೆಣ್ಣೆಕುದ್ರುವಿನಲ್ಲಿ ಸೀತಾನದಿಗೆ ಅಡ್ಡವಾಗಿ ಸೇತುವೆ ಸಹಿತ ಉಪ್ಪು ನೀರು ತಡೆಯ ಕಿಂಡಿ ಅಣೆಕಟ್ಟಿಗೆ ಸಚಿವ ಭೋಸ ರಾಜು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಪ್ರಮುಖರಾದ ಪ್ರಕಾಶ್ ಶ್ರೀಹರಿ, ಆಲ್ವಿನ್ ಅಗೇರಾ, ಶಾಂತಾರಾಮ ಆಚಾರ್ಯ ಮತ್ತಿತರರಿದ್ದರು.
- 300 ಕೋಟಿ ರೂ. ವೆಚ್ಚದ ಕಾಮಗಾರಿ
- ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳಿಗೆ ತರಾಟೆ
ಬ್ರಹ್ಮಾವರ: ಬಾರಕೂರು ಬಳಿಯ ಪಾಂಡೇಶ್ವರ ಮೂಡಹಡು ಮತ್ತು ಬಾರಕೂರು ಬೆಣ್ಣೆಕುದ್ರುವಿನಲ್ಲಿ ಸೀತಾನದಿಗೆ ಅಡ್ಡವಾಗಿ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟಿಗೆ ಸಣ್ಣ ನೀರಾವರಿ ಸಚಿವ ಭೋಸ ರಾಜು ಬುಧವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯಲ್ಲಿ ಅವಧಿ ಮುಗಿದರೂ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಸಚಿವರು ಸಂಬಂಧಿಸಿದ ಗುತ್ತಿಗೆದಾರರು ಮತ್ತು ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಯೋಜನೆಯಲ್ಲಿ 24 ಕಿ.ಮೀ. ದೂರ ನದಿ ದಂಡೆ ಕಟ್ಟುವ ಕಾಮಗಾರಿ ಕುರಿತು ಸಚಿವರಿಗೆ ಆಶ್ಚರ್ಯ ತಂದಿತ್ತು. ಕಿಂಡಿ ಅಣೆಕಟ್ಟು ಪ್ರದೇಶದ ಪೂರ್ವಭಾಗದಲ್ಲಿ ಅನೇಕ ಗ್ರಾಮಗಳಿಗೆ ಸಿಹಿನೀರಿನ ಲಭ್ಯತೆ ಹೆಚ್ಚಲಿರುವುದರ ಕುರಿತು ಯೋಜನೆಯಲ್ಲಿ ತಿಳಿಸಲಾಗಿತ್ತು. ಇಷ್ಟು ಬೃಹತ್ ಮೊತ್ತದ ಕಾಮಗಾರಿಯಿಂದ ಎಷ್ಟು ಜನರಿಗೆ ಮತ್ತು ಎಷ್ಟು ಪ್ರದೇಶಕ್ಕೆ ಉಪಯುಕ್ತವಾಗಲಿದೆ ಮತ್ತು ಸಾಧಕ ಭಾದಕಗಳ ಕುರಿತು ಸಮಗ್ರವಾಗಿ ಅಧ್ಯಯನ ಮಾಡಲಾಗಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಸಣ್ಣ ನೀರಾವರಿ ಇಲಾಖೆ ಮುಖ್ಯ ಅಭಯಂತಕ ಪ್ರಕಾಶ್ ಶ್ರೀಹರಿ, ಕಾರ್ಯಪಾಲಕ ಇಂಜಿನಿಯರ್ ಆಲ್ವಿನ್ ಅಗೇರಾ, ಸಹಾಯಕ ಇಂಜಿನಿಯರ್ ಶಾಂತಾರಾಮ ಆಚಾರ್ಯ, ಸುಧಾಕರ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಉಪಸ್ಥಿತರಿದ್ದರು.
ಕಿಂಡಿ ಅಣೆಕಟ್ಟಿನ ಪಶ್ಚಿಮ ಭಾಗದ ನದಿ ತೀರ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟು ಪೂರ್ತಿಗೊಂಡು ನೀರು ಶೇಖರಣೆಯಾದ ಬಳಿಕ ನದಿ ನೀರಿನ ಅಬ್ಬರ ಹೆಚ್ಚಿ ಕೃಷಿ ಭೂಮಿಗೆ ಉಪ್ಪು ನೀರು ಹರಿಯುವ ಆತಂಕ ಇರುವುದಕ್ಕೆ ಪಶ್ಚಿಮ ಭಾಗದಲ್ಲಿ ಪ್ರವಾಹದ ಸಮಯದಲ್ಲಿ ನೀರು ನುಗ್ಗುವ ಆತಂಕಕ್ಕೆ ನದಿ ದಂಡೆ ಎತ್ತರಿಸಿ, ಕಟ್ಟಿದ ಬಳಿಕ ಕಿಂಡಿ ಅಣೆಕಟ್ಟಿನ ದ್ವಾರ ಮುಚ್ಚುವ ಕಾರ್ಯ ಮಾಡಿ ಎಂದು ಸೂಲ್ಕುದ್ರು ಪಾಂಡೇಶ್ವರ ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಜೇಮ್ಸ್ ಒಲಿವೇರಾ ಸಚಿವರಲ್ಲಿ ಮನವಿ ಮಾಡಿದರು.