ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.
* ಪ್ರಧಾನಿ ಮೋದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
* ದೇಶದ ಜನರಿಗೆ ಬರೆ ಹಾಕಿದ ಕೇಂದ್ರ ಸರ್ಕಾರ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಅದು ಮಾಡಬೇಡಿ, ಇದು ಮಾಡಬೇಡಿ ಎಂದು ದೇಶದ ಜನರಿಗೆ ಹೇಳುತ್ತಿದ್ದಾರೆ. ಆದರೆ, ಇವರೇನು ಮಾಡಿದ್ದಾರೆ? ಇದೀಗ ಅನಗತ್ಯವಾಗಿ ಇಂಧನ ದರ ಏರಿಕೆ ಮಾಡಿದ್ದು ಏಕೆ? ಮೊದಲು ಅದನ್ನು ಹೇಳಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ 'ಸಾಮರ್ಥ್ಯವನ ಪಾರ್ಕ್'ಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಂಜಾಗ್ರತಾ ಕ್ರಮವೇನು?
ಮೋದಿಯವರು ಗಂಟೆ ಬಾರಿಸಬೇಕು ಅಂದ್ರೆ ನಾವು ಬಾರಿಸುತ್ತೇವೆ. ಚಪ್ಪಾಳೆ ಹೊಡೀರಿ ಅಂದ್ರೆ ಹೊಡೀತೇವೆ. ಪೆಟ್ರೋಲ್-ಡೀಸೆಲ್ ಜಾಸ್ತಿ ಬಳಸಬೇಡಿ ಅಂದರೂ ನಾವು ಪಾಲಿಸುತ್ತೇವೆ. ಬಂಗಾರ ಖರೀದಿಸಬೇಡಿ ಎಂದರೆ ಬಿಡುತ್ತೇವೆ. ದೇಶಕ್ಕಾಗಿ ನಾವೂ ಸಹ ಇತಿ&ಮಿತಿ ಪಾಲಿಸೋಣ. ಆದರೆ ಇಂತಹ ಪರಿಸ್ಥಿತಿ ಉದ್ಭವಿಸಲು ಕಾರಣ ಯಾರು? ಮುಂಜಾಗ್ರತೆಗಾಗಿ ಪ್ರಧಾನಿ ಏನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಬೇಕಲ್ಲವೇ ಎಂದರು.
ಅಮೆರಿಕದ ಬಿಗಿ ಹಿಡಿತ
ಇತ್ತೀಚೆಗೆ ಪ್ರಧಾನಿ ಮೋದಿ ಅವರು ಏನೇನೋ ಹೇಳುತ್ತ ಬಂದಿದ್ದಾರೆ. ಆದರೆ, ಅಮೆರಿಕ ಯಾವ ರೀತಿ ನಮ್ಮ ಪ್ರಧಾನಿಯನ್ನು ಕಂಟ್ರೋಲ್ ಮಾಡುತ್ತಿದೆ ಎನ್ನುವುದನ್ನು ಮಾಧ್ಯಮದಲ್ಲೇ ನೋಡುತ್ತಿದ್ದೇವೆ. ಭಾರತದ ಬಗ್ಗೆ ಟ್ರಂಪ್ ಏನು ಹೇಳುತ್ತಿದ್ದಾರೆ ಗೊತ್ತಲ್ಲ ಎಂದು ವ್ಯಂಗ್ಯವಾಡಿದರು.
ದರ ಏರಿಕೆ ರಾಜಕಾರಣ
ಪಂಚ ರಾಜ್ಯ ಚುನಾವಣೆ ಮುಗಿದ ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಸಂಪೂರ್ಣ ರಾಜಕಾರಣ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿಲ್ಲ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಕಚ್ಚಾ ತೈಲ ಬೆಲೆ ಎಷ್ಟು ಏರಿತ್ತು ಗೊತ್ತಿದೆ. ಆದರೆ, ಜನರಿಗೆ ಬರೆ ಹಾಕುವ ಕೆಲಸ ಮಾಡಿರಲಿಲ್ಲ. ಈಗ ದಿಢೀರ್ ಆಗಿ 3 ರೂಪಾಯಿ ಬೆಲೆ ಏರಿಸಿ ಜನರ ಮೇಲೆ ಹೊರೆ ಹಾಕಿದ್ದಾರೆ ಎಂದು ಲಕ್ಷ್ಮೀ ಆರೋಪಿಸಿದರು.
ಶಿಕ್ಷಣದಲ್ಲಿ ಮಾಡಬೇಡಿ ರಾಜಕಾರಣ
ಹಿಜಾಬ್ಗೆ ಸರ್ಕಾರ ಅನುಮತಿ ನೀಡಿದ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಿಕ್ಷಣ ಕ್ಷೇತ್ರದಲ್ಲಿ ಯಾವತ್ತೂ ರಾಜಕಾರಣ ಮಾಡಬಾರದು. ಮಕ್ಕಳು ಮುಗ್ಧರಿದ್ದಾರೆ. ಮಕ್ಕಳು ಕಲಿಯಲೆಂದು ಪಾಲಕರು ಶಾಲೆ-ಕಾಲೇಜಿಗೆ ಕಳಿಸುತ್ತಾರೆ. ಈ ವಿಚಾರದಲ್ಲಿ ಹೆಚ್ಚು ಚರ್ಚೆ ಮಾಡಬಾರದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ವಾತಾವರಣ ನಿರ್ಮಿಸಬೇಕು. ಅವರ ಭವಿಷ್ಯದೊಂದಿಗೆ ಚಲ್ಲಾಟ ಆಡಬಾರದು. ಹಿಜಾಬ್ ಅಥವಾ ಇನ್ನಾವುದೇ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಮಕ್ಕಳ ಭವಿಷ್ಯ ತಲೆಯಲ್ಲಿಟ್ಟುಕೊಂಡು ರಾಜಕಾರಣ ಮಾಡಿ ಎಂದಷ್ಟೇ ಹೇಳುತ್ತೇನೆ ಎಂದರು.
"
ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟದ ವಿಸ್ತರಣೆ ಎಲ್ಲವೂ ಪಕ್ಷದ ಹೈಕಮಾಂಡ್ ತೀರ್ಮಾನ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಈಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲ್ಲ. ಬಾಗಲಕೋಟೆಯಲ್ಲಿ ಅಂಗನವಾಡಿಯಿಂದ ಹಣ ಸಂಗ್ರಹ ಮಾಡಲಾಗಿದೆ ಎಂಬ ಆರೋಪ ಸುಳ್ಳು. ಯಾರಾದರೂ ಹಣ ಸಂಗ್ರಹಿಸಿದ್ದಲ್ಲಿ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ತನಿಖೆಯನ್ನೂ ನಡೆಸಲಾಗುವುದು.
— ಲಕ್ಷ್ಮೀ ಹೆಬ್ಬಾಳ್ಕರ್. ಜಿಲ್ಲಾ ಉಸ್ತುವಾರಿ ಸಚಿವೆ.