ಉಡುಪಿಯ ಮಲ್ಪೆ ಕಡಲತೀರದಲ್ಲಿ ಅಕ್ಕ ಕೆಫೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಮಂಜುನಾಥ್ ಭಂಡಾರಿ, ಸ್ವರೂಪಾ ಟಿ.ಕೆ., ಪ್ರತೀಕ್ ಬಾಯಲ್, ಜೇಮ್ಸ್ ಡಿಸಿಲ್ವಾ, ನವ್ಯಾ, ಅವಿನಾಶ್, ಸೌಮ್ಯಾ, ನಿಧಿ ಸಂಜೀವಿನಿ ಸ್ವಸಹಾಯ ಸಂದ ಸದಸ್ಯರು ಇದ್ದರು.
* ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅನಿಸಿಕೆ
* ಮಲ್ಪೆ ಕಡಲತೀರದಲ್ಲಿ 'ಅಕ್ಕ ಕೆಫೆ' ಉದ್ಘಾಟನೆ
ಉಡುಪಿ: ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅಕ್ಕ ಕೆಫೆ ಕೇವಲ ಉಪಹಾರ ಮಂದಿರವಲ್ಲ. ಅದು ಮಹಿಳೆಯರ ಶ್ರಮ ಮತ್ತು ಸ್ವಾಭಿಮಾನದ ಸಂಕೇತ. ಮಹಿಳಾ ಸಬಲೀಕರಣದ ಹೊಸ ಆಯಾಮದ ದಿಕ್ಸೂಚಿಯಾಗಿದೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಮಲ್ಪೆ ಬೀಚ್ನಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಂಜೀವಿನಿ ಯೋಜನೆಯಡಿ ಉಡುಪಿ ಜಿಪಂ ಸಹಯೋಗದೊಂದಿಗೆ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸಿದ್ಧಗೊಂಡಿರುವ ಅಕ್ಕ ಕೆಫೆಯನ್ನು ಶನಿವಾರ
(ಮೇ 16) ಉದ್ಘಾಟಿಸಿ ಮಾತನಾಡಿದರು.
ಈ ವಿಶೇಷ ಕೆಫೆಯನ್ನು ಕಲ್ಯಾಣಪುರದ 'ನಿಧಿ ಸಂಜೀವಿನಿ ಸ್ವಸಹಾಯ ಸಂಘ' ನಿರ್ವಹಿಸಲಿದೆ. ಮಹಿಳೆಯರೇ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲಿದ್ದು, ಆರ್ಥಿಕ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದಾರೆ. ಆಕರ್ಷಕ ವಿನ್ಯಾಸದ ಈ ಮೊಬೈಲ್ ಕೆಫೆ ಮಲ್ಪೆ ಬೀಚ್ಗೆ ಬರುವ ಪ್ರವಾಸಿಗರಿಗೆ ಸ್ಥಳೀಯ ರುಚಿಕರ ಆಹಾರ ಪದಾರ್ಥ ಒದಗಿಸಲಿ ಎಂದು ಸಚಿವೆ ಲಕ್ಷ್ಮೀ ಆಶಿಸಿದರು.
ವಿಪ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್ ಬಾಯಲ್, ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ನವ್ಯಾ, ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಕೃಷಿ ವ್ಯವಸ್ಥಾಪಕಿ ಸೌಮ್ಯಾ, ಜಿಲ್ಲಾ ಹಾಗೂ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ, ಗ್ರಾಪಂ ಮಟ್ಟದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿ ಹಾಗೂ ಪಶು ಸಖಿ ಉಪಸ್ಥಿತರಿದ್ದರು.