ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸ್ತುತ ಎಸ್​ಎಸ್​ಎಲ್​ಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್​ ಗಳಿಸಿದ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ ಅವರನ್ನು ಲಕ್ಷ್ಮೀ ಹೆಬ್ಬಾಳ್ಕರ್​ ಸನ್ಮಾನಿಸಿದರು. ಸ್ವರೂಪಾ ಟಿ.ಕೆ., ಮಂಜುನಾಥ್​ ಭಂಡಾರಿ, ಪ್ರತೀಕ್​ ಬಾಯಲ್​ ಇತರರಿದ್ದರು. 
ಉಡುಪಿ

ಉಡುಪಿ ಜಿಲ್ಲೆಯ ಸಾಧಕರು ಪ್ರೇರಣೆಯಾಗಲಿ

* ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಆಶಯ

ಉಡುಪಿ: ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುವ ಉಡುಪಿ ವಿಶೇಷ ಜಿಲ್ಲೆಯಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ರತಿವರ್ಷವೂ ರಾಜ್ಯ ಮಟ್ಟದಲ್ಲಿ ರ್ಯಾಂಕ್​ ಗಳಿಸುವ ಮೂಲಕ ರಾಜ್ಯದ ಗಮನ ಸೆಳೆಯುತ್ತಾರೆ. ಅಲ್ಲದೆ, ಜಿಲ್ಲೆಯ ಅಧಿಕಾರಿಗಳೂ ಸಹ ತಮ್ಮ ಕಾರ್ಯದ ಮೂಲಕ ಸಾಧನೆ ಮಾಡುತ್ತಿರುತ್ತಾರೆ. ಇಲ್ಲಿನ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳ ಸಾಧನೆ ಇತರರಿಗೂ ಪ್ರೇರಣೆ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಆಶಯ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಪಂಚಾಯಿತಿಯ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಶನಿವಾರ (ಮೇ 16) ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಅಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾಡಳಿತದಿಂದ ಗೌರವ
ಪ್ರಸ್ತುತ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್​ ಆದ ಕುಂದಾಪುರದ ಪ್ರೀತಂ ಜಿ. ಪೂಜಾರಿ (625 ಅಂಕ), ಕಲಾ ವಿಭಾಗದ ಸುಮೇಧಾ (589), ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ ರಶ್ಮಿ (598), ಪ್ರೇರಣಾ ಹೆಗಡೆ (598), ಅನ್ವಿಕಾ (598) ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕಲಿತು 625ರಲ್ಲಿ 616 ಅಂಕ ಗಳಿಸಿದ ಅನನ್ಯಾ ಆಚಾರ್ಯ ಅವರನ್ನು ಜಿಲ್ಲಾಡಳಿತದ ವತಿಯಿಂದ ಗೌರವಿಸಿದರು.

ಧನ ಸಹಾಯ ವಿತರಣೆ

ಕಾಪು ತಾಲೂಕಿನ ಮಲ್ಲಾರು ಫಕೀರನ ಕಟ್ಟೆಯಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿಶೇಷ ಧನಸಹಾಯದ ಚೆಕ್​ ವಿತರಿಸಿದರು.
ಡಿಸಿ ಸ್ವರೂಪಾ ಟಿ.ಕೆ., ಎಸ್ಪಿ ಹರಿರಾಂ ಶಂಕರ್​, ಪ್ರತೀಕ್​ ಬಾಯಲ್, ವಿಪ ಸದಸ್ಯ ಎಸ್​.ಎಲ್​. ಭೋಜೇಗೌಡ ಇತರರಿದ್ದರು.

ಸಾಧಕ ತಹಸೀಲ್ದಾರರಿಗೆ ಗೌರವ

ಕಂದಾಯ ಇಲಾಖೆಯ ಯೋಜನೆಗಳಾದ ಹಕ್ಕುಪತ್ರ, ದರಖಾಸ್ತು ಪೋಡಿ, ಇ-ಖಾತಿಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಜಿಲ್ಲೆಯ ತಹಸೀಲ್ದಾರರು ಹಾಗೂ ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಕುಂದಾಪುರ ತಹಸೀಲ್ದಾರ್​ ಪ್ರದೀಪ್​ ಕುರುಡೇಕರ್​ 4ನೇ ಸ್ಥಾನ (ಶೇ.99 ಪ್ರಗತಿ), ಕಾರ್ಕಳ ತಹಸೀಲ್ದಾರ್​ ಪ್ರದೀಪ್​ ಆರ್​. 6ನೇ ಸ್ಥಾನ (ಶೇ.97ಪ್ರಗತಿ), ಶ್ರೀಕಲಾ (ಎಡಿಎಲ್​ಆರ್​, ಕಾರ್ಕಳ) 8ನೇ ಸ್ಥಾನ (ಶೇ.90 ಪ್ರಗತಿ), ಉಡುಪಿ ತಹಸೀಲ್ದಾರ್​ ಗುರುರಾಜ್​ ಪಿ.ಆರ್​. 14ನೇ ಸ್ಥಾನ (ಶೇ.94 ಪ್ರಗತಿ).