ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಚಿವ ಯು.ಟಿ.ಖಾದರ್ ಶುಕ್ರವಾರ ಸಂಜೆ ಭೇಟಿ ನೀಡಿ ಅಧಿಕಾರಿಗಳ ಜತೆಗೆ ಸಭೆ ನಡೆಸಿದರು. ಡಾ.ದಿನೇಶ್ ಕಾಮತ್, ಚಂದ್ರಹಾಸ್ ಆರ್.ಕರ್ಕೇರ, ಬೇಬಿ ಕುಂದರ್ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿ ಆಸ್ಪತ್ರೆ, ಇಲಾಖೆಯ ವ್ಯವಸ್ಥೆಗಳ ಪರಿಶೀಲಿಸಿದರು.
ರೋಗಿಗಳ ಜತೆಗೆ ಮಾತುಕತೆ ನಡೆಸಿದ ಬಳಿಕ ಸಚಿವರು ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳ ಬಳಿ ವರದಿ ಪಡೆದುಕೊಂಡರು. ಈ ವೇಳೆ ಔಷಧಗಳ ಸಂಗ್ರಹ, ವೈದ್ಯರ ಹಾಜರಾತಿ ಪುಸ್ತಕಗಳ ಪರಿಶೀಲಿಸಿದರು.
ನಂತರ ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗದೆ ಸಮಸ್ಯೆ ಆಗಬಾರದು. ಈ ಕುರಿತು ಅಧಿಕಾರಿಗಳು ಪರಿಶೀಲಿಸುತ್ತಿರಬೇಕು ಎಂದರು. ಸುಸಜ್ಜಿತ ಆಸ್ಪತ್ರೆಯಾದರೂ ಆಗಮಿಸುವ ರೋಗಿಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಸ್ಪಷ್ಟೀಕರಣ ಕುರಿತು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದೇ ವೇಳೆ ಅಧಿಕಾರಿಗಳ ಜತೆಗೆ ತಾಲೂಕು ಆಸ್ಪತ್ರೆಯ ಅಭಿವೃದ್ಧಿ ಕುರಿತು ಸಚಿವರು ಸಭೆ ನಡೆಸಿದರು.
ನಂತರ ಸುದ್ದಿಗಾರರ ಜತೆಗೆ ಮಾತನಾಡಿ, ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ತಂಡವಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದ್ದು, ಆಸ್ಪತ್ರೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಕುರಿತು ಚರ್ಚಿಸಲಾಗಿದೆ. ಇಲ್ಲಿ 12 ವೈದ್ಯರು, 25 ಡಿ ಗ್ರೂಪ್ ನೌಕರರು, 27 ನರ್ಸ್‌ಗಳಿದ್ದಾರೆ. ಡಯಾಲಿಸಿಸ್ ಕೇಂದ್ರ ಪೂರ್ಣ ಪ್ರವಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ 50 ರಿಂದ 60 ಆರ್ಥೋ ಆಪರೇಷನ್ ಹಾಗೂ 50 ಜನರಲ್ ಸರ್ಜರಿ ಆಗುತ್ತಿವೆ ಎಂದು ಮಾಹಿತಿ ನೀಡಿದರು.
ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ದಿನೇಶ್ ಕಾಮತ್, ಚಂದ್ರಹಾಸ್ ಆರ್.ಕರ್ಕೇರ, ಬೇಬಿ ಕುಂದರ್, ಅಬ್ದುಲ್ ರರಝಾಕ್ ಕುಕ್ಕಾಜೆ, ರಶೀದ್ ವಿಟ್ಲ, ರಿಯಾಜ್ ನರಿಕೊಂಬು, ಸುರೇಶ್ ನಾವೂರು, ಫಯಾಜ್ ಮುಡಿಪು, ಯು.ಟಿ.ಫರೀದ್, ವೈದ್ಯರು, ಸಿಬ್ಬಂದಿ, ಮುಂತಾದವರು ಉಪಸ್ಥಿತರಿದ್ದರು.
ಬಂಟ್ವಾಳ ವಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸಹಕಾರ ನೀಡಲು ಆರೋಗ್ಯ ಇಲಾಖೆ ಬದ್ದವಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಂದು ಈ ಬಗ್ಗೆ ಪರಿಶೀಲಿಸಲಾಗುವುದು
— ಯು.ಟಿ.ಖಾದರ್, ಆರೋಗ್ಯ ಹಾಗೂ ದ.ಕ.ಉಸ್ತುವಾರಿ ಸಚಿವ