ಕನಕಮಜಲು ಕನಕಕಲಾ ಗ್ರಾಮದ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಕಾರ್ಯಕ್ರಮವನ್ನು ನ.ಸೀತಾರಾಮ ಉದ್ಘಾಟಿಸಿದರು. ಸಂಪತ್ ಕುಮಾರ್ ಮಡಿಕೇರಿ, ಸುಧಾಕರ ಕಾಮತ್ ಮೊದಲಾದವರಿದ್ದರು.
ಸುಳ್ಯ: ಭಾರತದಲ್ಲಿ ನಮ್ಮ ಜೀವನ ಕಲೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ಭಾರತೀಯ ಕಲೆಗಳು ನಮ್ಮ ಮನಸ್ಸನ್ನು, ಬದುಕನ್ನು ಅರಳಿಸುತ್ತದೆ. ಈ ಕಲೆಗಳನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕಾದ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಸಾಮಾಜಿಕ ಕಾರ್ಯಕರ್ತ ನ.ಸೀತಾರಾಮ ಹೇಳಿದರು.
ಕನಕಮಜಲು ಕನಕಕಲಾ ಗ್ರಾಮದ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕನಕ ಸೌಧ ಸಭಾಂಗಣದಲ್ಲಿ ಗುರು ಪೂರ್ಣಿಮೆ ಆಚರಣೆ, ನೃತ್ಯ ನಮನ ಹಾಗೂ ಡಾ.ಗಿರೀಶ್ ಭಾರದ್ವಾಜ್ ಸಂಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪತ್ ಕುಮಾರ್ ಮಡಿಕೇರಿ ಡಾ.ಗಿರೀಶ್ ಭಾರದ್ವಾಜ್‌ಗೆ ನುಡಿನಮನ ಸಲ್ಲಿಸಿದರು. ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಸೀತಾರಾಮ ಬುಡ್ಲೆಗುತ್ತು, ಗುರುದೇವ್ ಅಕಾಡೆಮಿಯ ಕಲಾ ನಿರ್ದೇಶಕಿ ಚೇತನಾ ರಾಧಾಕೃಷ್ಣ, ರಾಧಾಕೃಷ್ಣ ಪಿ.ಎಂ. ಉಪಸ್ಥಿತರಿದ್ದರು.
ಭರತನಾಟ್ಯ ಗುರು ಡಾ.ಚೇತನಾ ರಾಧಾಕೃಷ್ಣ ಅವರ ಶಿಷ್ಯೆಯರಾದ ಪೂರ್ವಿಕಾ, ಶಮಿತಾ ನೇತೃತ್ವದಲ್ಲಿ ಮಂಡ್ಯ, ಮೈಸೂರು ಮತ್ತು ಕನಕಮಜಲು ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯನಮನ ಹಾಗೂ ಭರತನಾಟ್ಯ ಪ್ರದರ್ಶನಗೊಂಡಿತು.