ಉಡುಪಿಯಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಿಮಿತ್ತ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಸ್ವರ್ಣ ರಥದಲ್ಲಿಟ್ಟ ವೇದವರ್ಧನ ಶ್ರೀಗಳು ಭಕ್ತರತ್ತ ನಾಣ್ಯ, ಹಣ್ಣು-ಹಂಪಗಳನ್ನು ತೂರಿದರು..
* ಭಕ್ತರಿಗೆ ಅನ್ನ ಸಂತರ್ಪಣೆ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸಮೀಪದ ರಥಬೀದಿಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಗುರು ಸಾರ್ವಭೌಮರ 355ನೇ ಆರಾಧನೆಯ ನಿಮಿತ್ತ ಭಾನುವಾರ (ಆ.30) ಮಧ್ಯಾರಾಧನೆ ನಡೆಯಿತು.
ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ರಾಘವೇಂದ್ರ ಮಠದಲ್ಲಿ ಬೆಳಗ್ಗೆ ವೃಂದಾವನಕ್ಕೆ ಪೂಜೆ ಸಲ್ಲಿಸಿ, ಪಲ್ಲ ಪೂಜೆ ನೆರವೇರಿಸಿದರು. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಅಷ್ಟಮಠದ ವಿವಿಧ ಯತಿಗಳು ರಾಯರ ವೃಂದಾವನಕ್ಕೆ ಆಗಮಿಸಿ ಪೂಜಿಸಿದರು.
ರಾಯರ ಆರಾಧನೆಯ ಎರಡನೇ ದಿನವಾಗಿದ್ದ ಭಾನುವಾರ ಸಂಜೆ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೆಯಿತು. ರಾಯರ ಮಠದಿಂದ ರಥಬೀದಿಗೆ ಆಗಮಿಸಿದ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ವೇದವರ್ಧನ ಶ್ರೀಗಳು ಸ್ವರ್ಣ ರಥದಲ್ಲಿಟ್ಟು, ವಿಶೇಷ ಆರತಿ ಬೆಳಗಿದರು. ಬಳಿಕ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮೂಹದತ್ತ ಸ್ವರ್ಣ (ಪ್ರಚಲಿತ ನಾಣ್ಯ), ವಿವಿಧ ಹಣ್ಣು, ಕದಳೀಫಲ ಹಾಗೂ ನಾರಿಕೇಲ ಫಲಗಳವನ್ನು ತೂರಿದರು. ಭಕ್ತರು ಮುಗಿಬಿದ್ದು ಅವುಗಳನ್ನು ಹೆಕ್ಕುತ್ತ, ಗೋವಿಂದ, ಗೋವಿಂದ ಎಂಬ ಘೋಷಣೆ ಕೂಗಿದರು. ಬಳಿಕ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯಿದ್ದ ರಥವನ್ನು ರಥಬೀದಿಯಲ್ಲಿ ಒಂದು ಸುತ್ತು ಪ್ರದಕ್ಷಿಣಾಕಾರವಾಗಿ ಎಳೆಯಲಾಯಿತು.
ಶ್ರೀಕೃಷ್ಣ ಮಠದಲ್ಲಿ ಪೂಜೆ
ಶ್ರೀಕೃಷ್ಣ ಮಠದ ವಸಂತ ಮಂಟಪದಲ್ಲಿ ಪ್ರಹ್ಲಾದ ರಾಜರಿಗೆ ವಿಶೇಷ ಪೂಜೆ ಸಲ್ಲಿಸಿದ ವೇದವರ್ಧನ ಶ್ರೀ.
ರಥೋತ್ಸವದ ಬಳಿಕ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಸಂಪ್ರದಾಯದಂತೆ ಶ್ರೀಕೃಷ್ಣ ಮಠದ ವಸಂತ ಮಂಟಪದಲ್ಲಿ ಇಡಲಾಯಿತು. ಪರ್ಯಾಯ ವೇದವರ್ಧನ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿವಿಧ ಸುವಾದ್ಯದೊಂದಿಗೆ ಪಲ್ಲಕ್ಕಿಯ ಮೂಲಕ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಮರಳಿ ರಾಯರ ಮಠಕ್ಕೆ ತರಲಾಯಿತು.
ರಾತ್ರಿ ಪಲ್ಲಕ್ಕಿ ಉತ್ಸವ, ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆ ನಡೆಯಿತು. ಆ.31ರಂದು ಉತ್ತರಾರಾಧನೆಯೊಂದಿಗೆ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಪ್ರತಿವರ್ಷ ಶ್ರಾವಣ ಬಹುಳ ದ್ವಿತೀಯದಂದು ರಾಯರ ಆರಾಧನಾ ಮಹೋತ್ಸವ ನಡೆಯುತ್ತದೆ. ಈ ದಿನ ರಾಘವೇಂದ್ರರು ವೃಂದಾವನಸ್ಥರಾದ ಪುಣ್ಯದಿನ. ಇದು 355ನೇ ಆರಾಧನೆಯಾಗಿದ್ದು, ಉಡುಪಿ ರಾಯರ ಮಠದಲ್ಲಿ 101ನೇ ವರ್ಷದ ಆರಾಧನೆಯಾಗಿದೆ. ರಾಯರಿಗೆ ಇಂದು ಪಂಚಾಮೃತ ಅಭಿಷೇಕ, ರಥೋತ್ಸವ ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.
— ಜಯತೀರ್ಥ ಆಚಾರ್ಯ. ಉಡುಪಿ ರಾಘವೇಂದ್ರ ಮಠದ ಮ್ಯಾನೇಜರ್.