ಉಡುಪಿ: ಯುವಕ ಗಾಂಧೀಜಿಯ ಕೆಲಸಗಳು, ನಡೆ, ನುಡಿಗಳು ಇಂದಿನ ಯುವಕರಿಗೆ ಮಾದರಿಯಾಗಿದೆ. ಸತ್ಯಾಗ್ರಹ ಎಂಬ ಹೊಸ ವಿಧಾನವನ್ನು ಹುಟ್ಟುಹಾಕಿದರು. ಗಾಂಧೀಜಿಯ ತತ್ವಾದರ್ಶಗಳು ಸಾರ್ವಕಾಲಿಕ ಎಂದು ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್ ಓ. ಆರ್. ಪ್ರಕಾಶ್ ಹೇಳಿದರು.
ಎಂ.ಜಿ.ಎಂ. ಕಾಲೇಜಿನಲ್ಲಿ ಗಾಂಧಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದರು.
ಗಾಂಧೀಜಿ 23 ವರ್ಷಕ್ಕೆ ಯುವ ವಕೀಲರಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿ ಭಾರತೀಯ ಮೂಲದವರ ಧ್ವನಿಯಾಗಿ ಅವರನ್ನು ಸಂಘಟಿಸಿದರು. ಅವರು ಪತ್ರಕರ್ತರಾಗಿ ಇಂಡಿಯನ್ ಒಪೀನಿಯನ್ ಪತ್ರಿಕೆಯನ್ನು ನಾಲ್ಕು ಭಾಷೆಗಳಲ್ಲಿ ಪ್ರಕಟಿಸಿದ್ದರು. ಇದು ಸಂಟನೆಗೆ ಉತ್ತಮ ಉದಾಹರಣೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಶ್ವನಾಥ ಪೈ ಎಂ. ಲಾಲ್ ಬಹಾದೂರ್ ಶಾಸ್ತ್ರಿಯವರ ಜೀವನ ಹಾಗೂ ಆದರ್ಶಗಳ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಜಿ. ಪೈ ಅಧ್ಯಕ್ಷತೆಯನ್ನು ವಹಿಸಿದ್ದರು. ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಮಾತನಾಡಿದರು.
ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಸ್ವಾಗತಿಸಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ನಿರೂಪಿಸಿದರು. ಸಂಸತ ವಿಭಾಗ ಮುಖ್ಯಸ್ಥೆ ಡಾ. ವಸುಮತಿ ಭಟ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಗಾಂಧೀಜಿ ಪ್ರಿಯ ಭಜನೆಗಳ ಗಾಯನ ನಡೆಯಿತು.