ಎಸ್​ಐಆರ್​ ಪ್ರಕ್ರಿಯೆಯಲ್ಲಿ ಫಾರ್ಮ್-7ರ ದುರುಪಯೋಗ ತಡೆಯುವಂತೆ ಆಗ್ರಹಿಸಿ ಕಥೊಲಿಕ್​ ಸಭಾ ಉಡುಪಿ ಪ್ರದೇಶ ನಿಯೋಗದಿಂದ ಡಿಸಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು. ಮೆಲ್ವಿನ್​ ಆರಾನ್ಹಾ ಶಿರ್ವ, ಜೂಲಿಯೆಟ್​ ಡಿಸೋಜಾ, ಉರ್ಬಾನ್​ ಲೂವಿಸ್​, ಲೂವಿಸ್​ ಡಿಸೋಜಾ, ಕಿರಣ್​ ಲೂವಿಸ್​, ವೆರೋನಿಕಾ ಕರ್ನೇಲಿಯೋ, ರೋಶನಿ ಒಲಿವರ್​ ಇತರರಿದ್ದರು. 
ಉಡುಪಿ

ಫಾರ್ಮ್-7ರ ಅರ್ಜಿ ಸ್ವೀಕೃತಿ-ತಿರಸ್ಕಾರ ವಿವರ ಬಹಿರಂಗಪಡಿಸಿ

* ಉಡುಪಿ ಜಿಲ್ಲಾಡಳಿತಕ್ಕೆ ಮೆಲ್ವಿನ್​ ಆರಾನ್ಹಾ ಶಿರ್ವ ಆಗ್ರಹ

* ಕಥೊಲಿಕ್​ ಸಭಾ ಉಡುಪಿ ಪ್ರದೇಶದಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್​ಐಆರ್​)ಯ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಬಳಸುವ ಫಾರ್ಮ್-7ರ ಅರ್ಜಿ ದುರುಪಯೋಗ ಮಾಡಿಕೊಳ್ಳುತ್ತಿದ್ದು ಸಾರ್ವಜನಿಕ ವಲಯದಲ್ಲಿ ಆತಂಕ ಹಾಗೂ ಸಂಶಯ ವ್ಯಕ್ತವಾಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಸ್ವೀಕರಿಸಿರುವ ಫಾರ್ಮ್-7ರ ಒಟ್ಟು ಸಂಖ್ಯೆ, ಅಂಗೀಕರಿಸಿದ ಹಾಗೂ ತಿರಸ್ಕರಿಸಿದ ಅರ್ಜಿಗಳ ಸಂಪೂರ್ಣ ವಿವರ ಬಹಿರಂಗಪಡಿಸಬೇಕು ಎಂದು ಕಥೊಲಿಕ್​ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್​ ಆರಾನ್ಹಾ ಶಿರ್ವ ಆಗ್ರಹಿಸಿದರು.

ಎಸ್​ಐಆರ್​ ಪ್ರಕ್ರಿಯೆಯಲ್ಲಿ ಫಾರ್ಮ್-7 ಅರ್ಜಿಗಳ ದುರುಪಯೋಗ ತಡೆಯುವುದು ಹಾಗೂ ಅರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಕಥೊಲಿಕ್​ ಸಭಾ ಉಡುಪಿ ಪ್ರದೇಶದ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ವರೂಪಾ ಟಿ.ಕೆ. ಅವರನ್ನು ಗುರುವಾರ (ಅ.8) ಭೇಟಿಯಾಗಿ ಮನವಿ ಸಲ್ಲಿಸಿದರು.

ಪ್ರಜಾಪ್ರಭುತ್ವಕ್ಕೆ ಧಕ್ಕೆ

ಅಲ್ಪಸಂಖ್ಯಾತರಾದ ಕೆಸ್ತ ಹಾಗೂ ಮುಸ್ಲಿಂ ಸಮುದಾಯ ಗುರಿಯಾಗಿಸಿ ಈ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬ ಅನುಮಾನವಿದೆ. ಹೀಗಾಗಿ ಯಾವುದೇ ರೀತಿಯ ದುರುಪಯೋಗ ಅಥವಾ ಅನ್ಯಾಯಕ್ಕೆ ಜಿಲ್ಲಾಡಳಿತ ಅವಕಾಶ ನೀಡಬಾರದು. ಮತದಾನದಿಂದ ವಂಚಿತರನ್ನಾಗಿಸಿದರೆ ಪ್ರಜಾಪ್ರಭುತ್ವದ ಮೂಲ ಹಕ್ಕಿನ ಮೇಲೆ ನೇರ ದುಷ್ಪರಿಣಾಮ ಬೀರಲಿದೆ. ಎಸ್​ಐಆರ್​ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ, ನಿಷ್ಪಕ್ಷಪಾತ ಹಾಗೂ ನಿಯಮಾನುಸಾರ ಕ್ರಮ ಖಚಿತಪಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೊದಲು ಸಂಬಂಧಪಟ್ಟ ಮತದಾರರಿಗೆ ಕಡ್ಡಾಯವಾಗಿ ನೋಟಿಸ್​ ನೀಡಿ, ಆಕ್ಷೇಪಣೆ ಸಲ್ಲಿಸಲು ಹಾಗೂ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಲು ಸಮರ್ಪಕ ಅವಕಾಶ ಕಲ್ಪಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಯಾವುದೇ ಸಮುದಾಯದ ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು, ಚುನಾವಣಾ ಪ್ರಕ್ರಿಯೆಯ ಕುರಿತು ಇರುವ ಸಾರ್ವಜನಿಕ ವಿಶ್ವಾಸ ಕಾಪಾಡುವುದು ತಮ್ಮ ಜವಾಬ್ದಾರಿಯಾಗಿದೆ ಎಂದರು.

ನಿಯೋಗದಲ್ಲಿ ಕಥೊಲಿಕ್​ ಸಭಾ ಉಡುಪಿ ಪ್ರದೇಶದ ಕಾರ್ಯದರ್ಶಿ ಜೂಲಿಯೆಟ್​ ಡಿಸೋಜಾ, ಕೋಶಾಧಿಕಾರಿ ಉರ್ಬಾನ್​ ಲೂವಿಸ್​, ನಿಯೋಜಿತ ಅಧ್ಯಕ್ಷ ಲೂವಿಸ್​ ಡಿಸೋಜಾ, ಉಡುಪಿ ವಲಯ ಅಧ್ಯಕ್ಷ ಕಿರಣ್​ ಲೂವಿಸ್​, ಮಾಜಿ ಅಧ್ಯಕ್ಷರಾದ ಅಲ್ಫೋನ್ಸ್​ ಡಿಕೋಸ್ತಾ, ವಲೇರಿಯನ್​ ಫೆರ್ನಾಂಡಿಸ್​, ಮೇರಿ ಡಿಸೋಜಾ, ಸುಮದಾಯದ ಮುಖಂಡರಾದ ವೆರೋನಿಕಾ ಕರ್ನೇಲಿಯೋ, ರೋಶನಿ ಒಲಿವರ್​ ಇನ್ನಿತರರು ಉಪಸ್ಥಿತರಿದ್ದರು.