ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸ್ವರೂಪ ಮಾತನಾಡಿದರು.
ಉಡುಪಿ: ಯುವಜನರಲ್ಲಿ ಮಾದಕ ದ್ರವ್ಯ ಸೇವನೆಯಿಂದ ಭವಿಷ್ಯದಲ್ಲಿ ಆಗುವ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾದಕ ದ್ರವ್ಯಗಳ ಸೇವೆನೆಯಿಂದ ಮನುಷ್ಯನಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ನಷ್ಟದ ಜೊತೆಗೆ ಗಂಭೀರ ಕಾಯಿಲೆಗಳು ಉಂಟಾಗುತ್ತದೆ. ಮನುಷ್ಯನ ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಅಸಮತೋಲನ ಉಂಟಾಗಿ ಆರೋಗ್ಯ ಹದಗೆಡುತ್ತದೆ. ಶಾಲಾ ಮತ್ತು ಕಾಲೇಜುಗಳಲ್ಲಿ ಮಾದಕ ದ್ರವ್ಯ ಮುಕ್ತ ವಾತಾವರಣವನನ್ನು ಸೃಷ್ಟಿಸಲು ಒತ್ತು ನೀಡಬೇಕು ಎಂದರು.
ಔಷಧಗಳಿಗೆ ವೈದ್ಯರ ಚೀಟಿ ಅಗತ್ಯ
ಜಿಲ್ಲೆಯ ಪ್ರತಿಯೊಂದು ಔಷಧ ಅಂಗಡಿಗಳಲ್ಲಿ ವೈದ್ಯರು ಶಿಫಾರಸ್ಸು ಮಾಡುವ ಔಷಧಿಗಳನ್ನು ಮಾತ್ರ ರೋಗಿಗಳಿಗೆ ನೀಡಬೇಕು. ವೈದ್ಯರ ನಿರ್ದೇಶನವಿಲ್ಲದೇ ಔಷಧ ಮಾರಾಟ ನಿಷೇಧ ಎಂಬ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಜಿಲ್ಲೆಯ ಎಲ್ಲಾ ಮೆಡಿಕಲ್ ಸ್ಟೋರ್ಗಳಲ್ಲಿ ಸಿ.ಸಿ.ಟಿ.ವಿ ಯನ್ನು ಕಡ್ಡಾಯವಾಗಿ ಆಳವಡಿಸಿರುವ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ಕೆಲವು ಕೈಗಾರಿಕಾ ಘಟಕಗಳಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ತಯಾರಿಕೆಯನ್ನು ಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ಆಗಿಂದಾಗ್ಗೆ ತಪಾಸಣೆಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 1058 ಶಾಲೆಗಳಲ್ಲಿ 17 ಶಾಲೆಗಳು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಎಂದು ದೃಢೀಕರಿಸಲಾಗಿದ್ದು, ವಿವರಗಳನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲು ಬಾಕಿ ಇದೆ. ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡ್ರಗ್ಸ್ ಟೆಸ್ಟ್ ಕಿಟ್ಗಳನ್ನು ಕಡ್ಡಾಯವಾಗಿ ದಾಸ್ತಾನು ಇರಿಸಿಕೊಳ್ಳಬೇಕು. ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಡ್ರಗ್ ಟೆಸ್ಟಿಂಗ್ ಕಿಟ್ ಮೂಲಕ ಪರೀಕ್ಷೆ ನಡೆಸಬೇಕು. ಮಾದಕ ವಸ್ತುಗಳ ಬಳಕೆಯ ಪ್ರಕರಣಗಳು ಪತ್ತೆಯಾದಲ್ಲಿ ಸಂಬಂಧಪಟ್ಟ ಹಾಸ್ಟೆಲ್ ವಾರ್ಡನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 104 ಕ್ಕೂ ಹೆಚ್ಚು ಧಿಡೀರ್ ದಾಳಿಗಳನ್ನು ನಡೆಸಿ, ಒಟ್ಟು 1249 ಕ್ಕೂ ಹೆಚ್ಚು ಪ್ರಕರಣವನ್ನು ದಾಖಲಿಸಿಕೊಂಡು 2,18,050 ರೂ ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೂ ಸಹ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿಸಿದ 173 ಪ್ರಕರಣಗಳಿಂದ 20,250 ರೂ. ದಂಡ ವಸೂಲಿ ಮಾಡಲಾಗಿದೆ ಎಂದರು.
ಸಭೆಯಲ್ಲಿ ಪೋಲಿಸ್ ಅಧೀಕ್ಷಕ ಹರಿರಾಮ್ ಶಂಕರ್, ಎ.ಎಸ್.ಪಿ ಸುಧಾಕರ ನಾಯಕ್, ಡಿ.ಎಚ್.ಓ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಕುಟಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.