ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಬ್ಲಾಕ್ ಅಧ್ಯಕ್ಷರ ಸಭೆಯಲ್ಲಿ ವಿನಯಕುಮಾರ್ ಸೊರಕೆ ಮಾತನಾಡಿದರು. ಅಶೋಕ್ ಕೊಡವೂರು, ದಿನೇಶ್ ಮಳವಳ್ಳಿ, ಹರೀಶ್ ಕಿಣಿ, ರೋಶನಿ ಒಲಿವೆರಾ, ಭಾಸ್ಕರ್ ರಾವ್ ಕಿದಿಯೂರು ಇದ್ದರು.
* ಮಾಜಿ ಸಚಿವ ವಿನಯಕುಮಾರ್ ಸಲಹೆ
* ಉಡುಪಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ
ಉಡುಪಿ: ಗ್ರಾಮೀಣ ಭಾಗಗಳಲ್ಲಿ ಯುವ ಶಕ್ತಿಯನ್ನು ಪ್ರೋತ್ಸಾಹಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಮಹತ್ವಾಕಾಂಕ್ಷೆಯ 'ಭಾರತ ಜೋಡೋ' ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಬೇಕು. ಜನಕಲ್ಯಾಣಕ್ಕಾಗಿ ಪ್ರಜಾಸೇವೆ ಅಭಿಯಾನ ಸಭೆಯೂ ಆರಂಭಗೊಂಡಿದ್ದು ಜನರಿಗೆ ಆಸರೆಯಾಗುವಂತಾಗಬೇಕು. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯ ಸಚಿವ ಸಂಪುಟ ನಡೆಯಲಿದ್ದು, ಕರಾವಳಿ ಭಾಗದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳ ನೀಲಿನಕ್ಷೆ ಸಿದ್ಧಪಡಿಸಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಲಹೆ ನೀಡಿದರು.
ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬ್ಲಾಕ್ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರುಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ದೂಷಿಸುವ ಬಿಜೆಪಿಯಿಂದಲೂ ಗ್ಯಾರಂಟಿ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ದೂಷಣೆ ಮಾಡುತ್ತಿದ್ದ ಬಿಜೆಪಿಯವರು ಇದೀಗ ಅವರ ಆಡಳಿತ ಇರುವ ರಾಜ್ಯಗಳಲ್ಲಿಯೂ ನಮ್ಮದೇ ರೀತಿಯಲ್ಲಿ ಯೋಜನೆ ಜಾರಿಗೊಳಿಸುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಈ ಯೋಜನೆ ಸಮರ್ಪಕವಾಗಿ ತಲುಪುವಂತಾಗಲು ಎಲ್ಲ ಗ್ರಾಮಗಳಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಬೇಕಿದೆ. ಕರಾವಳಿಯಲ್ಲಿ ಸರ್ಕಾರದ ಸಚಿವ ಸಂಪುಟ ನಡೆಯುವ ಮೊದಲು ಜಿಲ್ಲೆಯ ಅಭಿವೃದ್ಧಿ ಹಾಗೂ ಇರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದರು.
ಪಕ್ಷದ ಮುಖಂಡರಾದ ದಿನೇಶ್ ಮಳವಳ್ಳಿ, ಹರೀಶ್ ಕಿಣಿ, ರೋಶನಿ ಒಲಿವೆರಾ, ದಿನೇಶ್ ಪುತ್ರನ್, ಮೀನಾಕ್ಷಿ ಎಂ. ಬನ್ನಂಜೆ, ಹರಿಪ್ರಸಾದ್ ರೈ, ಬ್ಲಾಕ್ ಅಧ್ಯಕ್ಷರಾದ ರಮೇಶ್ ಕಾಂಚನ್, ಗೋಪಿನಾಥ್ ಭಟ್, ವೈ.ಸುಕುಮಾರ್, ಸಂತೋಷ್ ಕುಲಾಲ್, ಸುಭೋದ್ ರಾವ್ ಕಾರ್ಕಳ, ಮದನ್ ಕುಮಾರ್, ಮಹಾಬಲ ಕುಂದರ್, ನವೀನ್ ಚಂದ್ರ ಸುವರ್ಣ, ಆನಂದ್ ಪೂಜಾರಿ ಬೈಂದೂರ್, ಚಂದ್ರಶೇಖರ್ ಶೆಟ್ಟಿ ಕುಂದಾಪುರ, ಗೋಪಾಲ್ ಬಂಗೇರ ಕೋಟ, ರೋಷನ್ ಶೆಟ್ಟಿ, ಜಯಕುಮಾರ್, ಲಕ್ಷ್ಮೀಶ್ ಶೆಟ್ಟಿ, ಅಶೋಕ್ ಎಮಾರ್ಳ್, ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.
ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಸ್ವಾಗತಿಸಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು.