ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದರು.
ಉಡುಪಿ: ಮನೆ ಮನೆಗೆ ಪೈಪ್ ಲೈನ್ ಮೂಲಕ ಪಿ. ಎನ್. ಜಿ ಗ್ಯಾಸ್ ಸಂಪರ್ಕ ನೀಡುವ ಪೈಪ್ ಲೈನ್ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಿ, ಉಡುಪಿ ನಗರದ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಎನ್ಜಿ ಗ್ಯಾಸ್ ಸಂಪರ್ಕ ಕಾಮಗಾರಿ ಹಾಗೂ ಮೋಟಾರು ವಾಹನಗಳಿಗೆ ಸಿಎನ್ಜಿ ವಿತರಣೆ ಬಗ್ಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿ.ಎನ್.ಜಿ ಗ್ಯಾಸ್ ಸಂಪರ್ಕ ನೀಡುವ ಕಾಮಗಾರಿಯನ್ನು ಕಳೆದ 10 ವರ್ಷಗಳಿಂದ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಮುಂದಿನ ಜೂನ್ ಮಾಹೆ ಒಳಗಾಗಿ ಪೈಪ್ಲೈನ್ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಲು ಮುಂದಾಗಬೇಕು ಎಂದರು.
ಗ್ಯಾಸ್ ಸಂಪರ್ಕ ಪಡೆಯಲು ಆಸಕ್ತ ಸಾರ್ವಜನಿಕರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಕುರಿತ ಮಾಹಿತಿಯನ್ನು ಬ್ಯಾನರ್, ಕರಪತ್ರ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಪ್ರಚುರ ಪಡಿಸಬೇಕು. ನಗರಸಭಾ ವ್ಯಾಪ್ತಿಯಲ್ಲಿ ಅಂದಾಜು 35,000 ಮನೆಗಳಿಗೆ ಅನಿಲ ಸರಬರಾಜು ಆಗಬೇಕಾಗಿದೆ. ಪ್ರಸ್ತುತ 1500 ಮನೆಗಳಿಗೆ ಸಂಪರ್ಕ ಕಲ್ಪಿಸಲು ಪೈಪ್ಲೈನ್ ಸಿದ್ದವಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ರಿಕ್ಷಾ ಚಾಲಕರು ಆಟೋಗಳಿಗೆ ಸಿಎನ್ಜಿ ಅನಿಲ ಹಾಕಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಜಿಲ್ಲೆಗೆ ಹೆಚ್ಚುವರಿಯಾಗಿ ಸಿ.ಎನ್.ಜಿ ಗ್ಯಾಸ್ ಸಾಗಾಣಿಕೆ ಮಾಡಲು 4 ಜಂಬೋ ವಾಹನವನ್ನು ಒದಗಿಸಿದ್ದಲ್ಲಿ ಸಮಸ್ಯೆ ನಿವಾರಣೆಯಾಗಲಿದೆ. ಈ ಬಗ್ಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 11 ಸಿ ಎನ್ ಜಿ ವಿತರಣಾ ಘಟಕವಿದ್ದು, ಹೊಸದಾಗಿ ಮುನಿಯಾಲು, ಎಮಾರ್ಳು ಪ್ರದೇಶದಲ್ಲಿ ಹೊಸ ಸಿ ಎನ್ ಜಿ ವಿತರಣಾ ಘಟಕ ಮಂಜೂರು ಮಾಡಲು ಪತ್ರ ಬರೆಯಲಾಗಿದೆ ಸಂಸದರು ತಿಳಿಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಮಾತನಾಡಿ, ಅನಿಲ ಘಟಕದಲ್ಲಿ ಯಾವುದಾದರೂ ಸಮಸ್ಯೆ ಉಧ್ವವಿಸಿದಾಗ ಪರಿಹರಿಸಲು ಟೆಕ್ನಿಷಿಯನ್ ಕೊರತೆಯಿದ್ದು, ಹೆಚ್ಚುವರಿಯಾಗಿ ಸಿ.ಎನ್. ಜಿ ಆಪರೇಟರ್ ಗಳನ್ನು ನೇಮಕ ಮಾಡಿಕೊಂಡಿರಬೇಕೆಂದು ಅನಿಲ ಕಂಪೆನಿಯ ಪ್ರತಿನಿಧಿಗಳಿಗೆ ಸೂಚಿಸಿದರು. ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರವೀಂದ್ರ, ಅದಾನಿ ಹಾಗೂ ಗೇಲ್ ಕಂಪೆನಿ ಅಧಿಕಾರಿಗಳು ಉಪಸ್ಥಿತರಿದ್ದರು.