ಉಡುಪಿಯ ಡಿಸಿ ಕಚೇರಿಯಲ್ಲಿ ಮಳೆಗಾಲದ ಸಿದ್ಧತೆ ಕುರಿತ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್​ ಗದ್ಯಾಳ, ವಿವಿಧ ಇಲಾಖಾ ಅಧಿಕಾರಿಗಳಿದ್ದರು. 
ಉಡುಪಿ

ಮಳೆ ಅವಘಡ ಎದುರಿಸಲು ಸನ್ನದ್ಧರಾಗಿ

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಸೂಚನೆ 

* ಅಧಿಕಾರಿಗಳೊಂದಿಗೆ ಮುಂಗಾರು ಪೂರ್ವ ಸಭೆ

ಉಡುಪಿ: ಜಿಲ್ಲೆಯಲ್ಲಿ ಮೇ 26ರಿಂದ ಮುಂಗಾರು ಮಳೆಯಾಗುವ ಮುನ್ಸೂಚನೆ ಇದ್ದು, ಜಿಲ್ಲೆಯಲ್ಲಿ ಮಳೆಯಿಂದಾಗುವ ಪ್ರವಾಹ ಸೇರಿದಂತೆ ಇನ್ನಿತರ ಅವಘಡಗಳ ಪರಿಸ್ಥಿತಿ ಎದುರಿಸಲು ಎಲ್ಲ ಇಲಾಖಾ ಅಧಿಕಾರಿಗಳು ರಕ್ಷಣಾ ಸಾಧನದೊಂದಿಗೆ ಸನ್ನದ್ಧರಾಗಬೇಕು. ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಂಡು ಪಕೃತಿ ವಿಕೋಪಗಳನ್ನು ನಿರಾಯಾಸವಾಗಿ ನಿಭಾಯಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಮೇ 19) ಆಯೋಜಿಸಿದ್ದ ಪ್ರಸಕ್ತ ಸಾಲಿನ ಮುಂಗಾರು ಮಳೆ ಪ್ರಾರಂಭದ ಹಿನ್ನೆಲೆಯಲ್ಲಿ ಸಿದ್ಧತೆ ಕುರಿತ ಸಭೆಯಲ್ಲಿ ಮಾತನಾಡಿದರು.
24×7 ಕಂಟ್ರೋಲ್​ ರೂಮ್​
ಮಳೆ ಪ್ರಾರಂಭಕ್ಕೂ ಮುನ್ನ ಚರಂಡಿ, ತೋಡುಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳಿಯ ಸಂಸ್ಥೆಗಳು ನೋಡಿಕೊಳ್ಳಬೇಕು. ಅತಿವೃಷ್ಟಿಯಾದರೆ ತುರ್ತು ವಿಪತ್ತು ನಿರ್ವಹಣೆಗಾಗಿ ನೋಡಲ್​ ಅಧಿಕಾರಿಗಳನ್ನು ನೇಮಕ ಮಾಡಬೇಕು. ನಗರ ವ್ಯಾಪ್ತಿಯಷ್ಟೇ ಅಲ್ಲದೆ ಪುರಸಭೆ, ಪಪಂಗಳಲ್ಲೂ ದಿನದ 24 ಗಂಟೆಯೂ ಕಂಟ್ರೋಲ್​ ರೂಂ ತೆರೆಯಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡು ತಾಲೂಕು ಕಚೇರಿಯೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು ಎಂದರು.

ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಿ

ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳು ಸಹ ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಬೇಕು. ಕಲುಷಿತ ನೀರು ಕಂಡುಬಂದಲ್ಲಿ ಪುನಶ್ಚೇತನ ಕಾರ್ಯ ಕೈಗೊಳ್ಳಬೇಕು. ಸಭೆಯಲ್ಲಿ ಈ ಬಗ್ಗೆ ಸರಿಯಾದ ವರದಿ ನೀಡುತ್ತಿಲ್ಲ. ಯಾವ ಗ್ರಾಪಂ ವ್ಯಾಪ್ತಿಯಲ್ಲಿ ಕಲುಷಿತ ನೀರು ಕಂಡುಬಂದಿದೆ ಎಂಬ ಬಗ್ಗೆ ಕೂಡಲೇ ವರದಿ ನೀಡಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಎಎಸ್ಪಿ ಸುಧಾಕರ್​ ನಾಯಕ್​, ಸಹಾಯಕ ಕಮಿಷನರ್​ ರಶ್ಮಿ, ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.

ಮಾನ್ಸೂನ್​ ಟಾಸ್ಕ್​ಫೋರ್ಸ್​ ರಚಿಸಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆ ಪರಿಹರಿಸಲು ಮಾನ್ಸೂನ್​ ಟಾಸ್ಕ್​ಫೋರ್ಸ್​ ತಂಡ ರಚಿಸಿ, ಸಮಸ್ಯೆಯಾದರೆ ಕೂಡಲೇ ಸ್ಪಂದಿಸಬೇಕು. ಕುಂದು&ಕೊರತೆ ಮಾಹಿತಿ ನೀಡಲು ತುರ್ತು ಸಂಪರ್ಕ ದೂರವಾಣಿ ಸ್ಥಾಪಿಸಿ, ಪ್ರಚಾರ ಪಡಿಸಬೇಕು. ಹೆದ್ದಾರಿಗಳಿಗೆ ಅಡ್ಡಲಾಗಿ ಬೀಳುವಂತಹ ಮರಗಳಿದ್ದಲ್ಲಿ ತುರ್ತು ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಬೇಕು. ಮರವಂತೆ ಬೀಚ್​ನ ಬಳಿ ಲಾರಿ ಇನ್ನಿತರ ವಾಹನಗಳ ನಿಲುಗಡೆಯಿಂದ ಅಪಘಾತ ಹೆಚ್ಚುತ್ತಿದೆ. ಅಲ್ಲಿ ವಾಹನಗಳ ನಿಲುಗಡೆ ನಿಷೇಧದ ಫಲಕ ಅಳವಡಿಸಿ. ರಸ್ತೆ ಬದಿಯಲ್ಲಿರುವ ಗೂಡಂಗಡಿಗಳನ್ನೆಲ್ಲ ತೆರವು ಮಾಡಿಸಿ. ರಸ್ತೆ ಬದಿಯಲ್ಲಿ ಅನುಮತಿ ಪಡೆಯದೇ ಹಾಕಿರುವ ಬ್ಯಾನರ್​ಗಳನ್ನು ತೆರವುಗೊಳಿಸಿ. ಗಾಳಿ-ಮಳೆಯಿಂದ ಮರಗಳು ಬಿದ್ದು, ವಿದ್ಯುತ್​ ಸಂಪರ್ಕ ಕಡಿತಗೊಂಡಲ್ಲಿ ತಕ್ಷಣವೇ ಪುನರ್​ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಕೆರೆ-ಕೊಳ್ಳಗಳಿಗೆ ತಡೆಬೇಲಿ ಅಳವಡಿಸಿ
ಆಯಾ ವ್ಯಾಪ್ತಿಯ ಪಿಡಿಒಗಳು ತಮ್ಮ ಗ್ರಾಮಗಳಲ್ಲಿರುವ ತೆರೆದ ಕೆರೆಗಳು ಅಥವಾ ನೀರಿನ ಗುಂಡಿ, ಕೊಳ್ಳಗಳಿದ್ದಲ್ಲಿ ಅವುಗಳ ಸುತ್ತ ತಡೆಬೇಲಿ ಅಳವಡಿಸಿ ಎಚ್ಚರಿಕೆಯ ಫಲಕ ಹಾಕಬೇಕು. ಜಿಲ್ಲೆಯಲ್ಲಿರುವ ಶಿಥಿಲಗೊಂಡ ಶಾಲಾ ಕಟ್ಟಡಗಳ ದುರಸ್ತಿ ಕೆಲಸ ತ್ವರಿತವಾಗಬೇಕು. ಮಳೆಗಾಲದ ತುರ್ತು ಸಂದರ್ಭಗಳಲ್ಲಿ ಅಗತ್ಯವಿದ್ದಾಗ ಕಾಳಜಿ ಕೇಂದ್ರ ತೆರೆಯಲು ಶಾಲೆಗಳ ಸೂಕ್ತ ಕೊಠಡಿ ಸಿದ್ಧವಾಗಿಟ್ಟುಕೊಳ್ಳಬೇಕು. ಈ ಹಿಂದೆ ಹೆಚ್ಚಿನ ಪ್ರವಾಹ ಆಗಿರುವ ಸ್ಥಳ ಗುರುತಿಸಿ, ಈಗಿನಿಂದಲೇ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ತಾಲೂಕುಗಳಲ್ಲಿ ಲಭ್ಯವಿರುವ ಬೋಟ್​, ಈಜುಗಾರರ ಸಂಪೂರ್ಣ ಮಾಹಿತಿ ಇರಬೇಕು. ಗಣಿಗಾರಿಕೆ ನಡೆದ ಪ್ರದೇಶದಲ್ಲಿರುವ ಗುಂಡಿಗಳಲ್ಲಿ ಮಳೆ ನೀರುನಿಂತು ಅಲ್ಲಿ ಈಜಾಡಲು ಹೋಗಿ ಜೀವಹಾನಿ ಆಗಬಹುದು. ಅಂತಹ ಸ್ಥಳವಿದ್ದಲ್ಲಿ 'ಈಜಾಟ ನಿಷೇಧಿಸಿದೆ' ಎಂಬ ಎಚ್ಚರಿಕೆಯ ಫಲಕ ಅಳವಡಿಸಬೇಕೆಂದು ಸ್ವರೂಪಾ ತಿಳಿಸಿದರು. 

ಸಮುದ್ರ ಕೊರೆತ ನಿರ್ವಹಣಾ ಸಮಿತಿ ರಚಿಸಿ

ಮುಂಗಾರು ಪೂರ್ವದಲ್ಲೇ ಕಾಲುಸಂಕಗಳ ಸ್ಥಿತಿ-ಗತಿ ಪರಿಶೀಲಿಸಿ, ದುರಸ್ತಿ ಮಾಡಿಸಬೇಕು. ಕರಾವಳಿ ತೀರದಲ್ಲಿ ಉಂಟಾಗಬಹುದಾದ ಸಮುದ್ರ ಕೊರೆತಕ್ಕೆ ಸಂಬಂಧಿಸಿ 'ಸಮುದ್ರ ಕೊರೆತ ತಡೆಗಟ್ಟುವಿಕೆ ನಿರ್ವಹಣಾ ಸಮಿತಿ' ರಚಿಸಬೇಕು. ಸಮಿತಿಯ ಅಧಿಕಾರಿಗಳು ಸಮುದ್ರ ಕೊರೆತದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು. ಹವಾಮಾನ ಇಲಾಖೆ ನೀಡುವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಯಾವುದೇ ಮಾನವ ಹಾಗೂ ಪ್ರಾಣಿಗಳ ಜೀವಹಾನಿ ಆಗದಂತೆ ನೋಡಿಕೊಳ್ಳಬೇಕು ಎಂದು ಡಿಸಿ ತಿಳಿಸಿದರು.
"

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಕಾಯಿಲೆಗಳ ಹತೋಟಿಗೆ ಬೇಕಾಗುವ ಔಷಧ, ಚುಚ್ಚುಮದ್ದುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಆರೋಗ್ಯ ಇಲಾಖೆಯ ಕಂಟ್ರೋಲ್​ ರೂಂಗಳು ದಿನಪೂರ್ತಿ ಸಕ್ರಿಯವಾಗಿರಬೇಕು. ಡೆಂಘೆ, ಮಲೇರಿಯಾ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಬೇಕು.

— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.