ಪೂರ್ವಭಾವಿ ಸಭೆಯಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿದರು. ಕೃಷಿಕ ಸಮಾಜ ಅಧ್ಯಕ್ಷ ದೇವದಾಸ್ ಭಂಡಾರಿ, ಶ್ರೀ ಕೃಷ್ಣ ಧ್ಯಾನ ಮಂದಿರ ಸ್ಥಾಪಕ ಡಾ.ಮದನ್ ಮೋಹನ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.  
ಉಡುಪಿ

ಪ್ರವಾಸೋದ್ಯಮ ಪಟ್ಟಿಗೆ ಧ್ಯಾನಕೇಂದ್ರ

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ದ.ಕ ಜಿಲ್ಲೆಯಲ್ಲಿ ಸೂಕ್ತ ವಸ್ತುಸಂಗ್ರಹ ಇಲ್ಲ. ಆದರೆ ಶ್ರೀ ಕೃಷ್ಣ ಧ್ಯಾನ ಮಂದಿರದಲ್ಲಿ ಅಂತಹ ವ್ಯವಸ್ಥೆ ಇದ್ದು ಜನಾಕರ್ಷಣೆ ಅನಿವಾರ್ಯ. ಈ ನಿಟ್ಟಿನಲ್ಲಿ ಕೃಷಿ, ಆಹಾರ ಮೇಳ, ಸಾಂಸ್ಕೃತಿಕ ಉತ್ಸವ ಆಯೋಜಿಸಿ ಪ್ರವಾಸೋದ್ಯಮ ಪಟ್ಟಿಯಲ್ಲಿ ಸೇರ್ಪಡೆಗೆ ಪ್ರಯತ್ನ ನಡೆಸಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭರವಸೆ ನೀಡಿದರು.
ಕೃಷಿಕ ಸಮಾಜ ಆಶ್ರಯದಲ್ಲಿ ಮುಡಿಪು ಶ್ರೀ ಕೃಷ್ಣ ಧ್ಯಾನ ಮಂದಿರ ಸಹಯೋಗದೊಂದಿಗೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಮುಡಿಪುವಿನಲ್ಲಿ ನಡೆಯಲಿರುವ ಕೃಷಿ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಬುಧವಾರ ಧ್ಯಾನ ಮಂದಿರದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೃಷಿ ಜತೆ ಯುವ ಜನರನ್ನು ಆಕರ್ಷಿಸುವ ಕಾರ್ಯಕ್ರಮ ನಡೆಯಬೇಕು. ಗ್ರಾಮೀಣ ಮಟ್ಟದಲ್ಲೂ ನುಡಿಸಿರಿ ಮಾದರಿಯ ದೊಡ್ಡಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಬೇಕು. ಪ್ರವಾಸೋದ್ಯಮ ಇಲಾಖಾ ಸಚಿವರನ್ನು ಆಹ್ವಾನಿಸಿ ಪ್ರವಾಸೋದ್ಯಮ ಇಲಾಖೆ ಪಟ್ಟಿಗೆ ಧ್ಯಾನ ಕೇಂದ್ರ ಸೇರ್ಪಡೆ ಪ್ರಯತ್ನ ನಡೆಸಲಾಗುವುದು ಎಂದರು.
ಶ್ರೀ ಕೃಷ್ಣ ಧ್ಯಾನ ಮಂದಿರ ಸ್ಥಾಪಕ ಡಾ.ಮದನ್ ಮೋಹನ್ ನಾಯಕ್, ಉದ್ಯಮಿಗಳಾದ ರಾಧಾಕೃಷ್ಣ ರೈ ಉಮಿಯ, ರಮೇಶ್ ಶೇಣವ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಉಪಾಧ್ಯಕ್ಷ ಎನ್.ಎಸ್.ನಾಸೀರ್ ನಡುಪದವು, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕೂವೆತ್ತಬೈಲ್, ಮುಡಿಪು ಅಂತ ಜೋಸೆಫ್ ಚರ್ಚ್ ಉಪಾಧ್ಯಕ್ಷ ಅರುಣ್ ಡಿಸೋಜ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಮತಾ ಗಟ್ಟಿ, ಧ್ಯಾನ ಕೇಂದ್ರ ಟ್ರಸ್ಟಿ ಶೈಲೇಂದ್ರ ಭರತ್ ನಾಯಕ್ ನಚ್ಚಗುತ್ತು, ಕುರ್ನಾಡು ಗ್ರಾಪಂ ಮಾಜಿ ಗಣೇಶ್ ನಾಯಕ್, ಮನ್ರೆಗಾದ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ, ಉದ್ಯಮಿಗಳಾದ ಚಂದ್ರಶೇಖರ ಗಟ್ಟಿ ಗುಂಡ್ಯ, ಇಬ್ರಾಹಿಂ ತಪ್ಷಿಯಾ ನಡುಪದವು, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಜೋಸೆಫ್ ಕುಟಿನ್ಹ, ಕೃಷಿ ಅಧಿಕಾರಿ ನಂದನ್ ಶೆಣೈ, ಉದ್ಯಮಿಗಳಾದ ಪ್ರವೀಣ್ ಆಳ್ವ ಮಯ್ಯಲ, ಇಬ್ರಾಹಿಂ ಮದ್ಯನಡ್ಕ, ವಿಜೇಶ್ ನಾಯಕ್ ನಡಿಗುತ್ತು, ಜಲೀಲ್ ಮೋಂಟುಗೋಳಿ ಮೊದಲಾದವರಿದ್ದರು. ಬಂಟ್ವಾಳ ತಾಪಂ ಮಾಜಿ ಸದಸ್ಯ ಹೈದರ್ ಕೈರಂಗಳ ಸ್ವಾಗತಿಸಿದರು. ಕೃಷಿಕ ಸಮಾಜ ಅಧ್ಯಕ್ಷ ದೇವದಾಸ್ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ಕೃಷ್ಣ ಧ್ಯಾನ ಮಂದಿರದ ಸುಂದರ ಪರಿಸರದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಎರಡು ದಿನಗಳ ಕೃಷಿ ಮೇಳ ನಡೆಸಿ ತಜ್ಞರನ್ನು ಕರೆಸಿ ಉಪಕರಣ ಪ್ರದರ್ಶನ, ಆಹಾರ ಮೇಳ ನಡೆಸಿ ಪರಿಸರದ ಸೌಂದರ್ಯ ಸವಿಯುವ ಅವಕಾಶ ಜನತೆಗೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.