ಉಳ್ಳಾಲ: ಮಂಗಳೂರಿನ ಇಎಸ್‌ಐ ಆಸ್ಪತ್ರೆ ಹಾಗೂ ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ಔಷಧ ಕೊರತೆ ಇದೆ ಎಂದು ಆರೋಪಿಸಿ ಕೋಟೆಕಾರ್ ನಿವಾಸಿ ಧನುಷ್ ಶಾಸ್ತನಗರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ತಾಯಿಗೆ ಹೃದಯ ಸಂಬಂಧಿತ ಕಾಯಿಲೆ ಇದ್ದು ಇಎಸ್‌ಐ ವ್ಯವಸ್ಥೆ ಮೂಲಕ ಕಳೆದ ಒಂದು ವರ್ಷದಿಂದ ನಿರಂತರವಾಗಿ ಔಷಧ ಪಡೆಯಲು ಮಂಗಳೂರಿನ ಇಎಸ್‌ಐ ಆಸ್ಪತ್ರೆಗೆ ತೆರಳುತ್ತಿದ್ದರೂ ಬಹುತೇಕ ಸಂದರ್ಭ ಔಷಧ ಲಭ್ಯವಿಲ್ಲದೆ ವಾಪಸಾಗುವ ದುಸ್ಥಿತಿ ಎದುರಾಗುತ್ತಿದೆ.
ಮಣಿಪಾಲದಲ್ಲಿ ಉದ್ಯೋಗದಲ್ಲಿರುವುದರಿಂದ ವೈದ್ಯರ ಸಲಹೆಯಂತೆ ಪ್ರತಿ ಒಂದೆರಡು ತಿಂಗಳಿಗೊಮ್ಮೆ ಕೆಲಸ ಬಿಟ್ಟು ಔಷಧ ಪಡೆಯಲು ಬರಬೇಕಾಗುತ್ತದೆ. ಬಿಜೈನಲ್ಲಿರುವ ಇಎಸ್‌ಐ ಡಿಸ್ಪೆನ್ಸರಿಯಲ್ಲಿ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಕೌಂಟರ್ ಬಳಿ ಬಂದಾಗ ಸ್ಟಾಕ್ ಇಲ್ಲ, ಕದ್ರಿಯ ಇಎಸ್‌ಐ ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ.
ಕದ್ರಿ ಇಎಸ್‌ಐ ಆಸ್ಪತ್ರೆಯ ಡಿಸ್ಪೆನ್ಸರಿಯಲ್ಲಿ ಮತ್ತೆ ದೀರ್ಘ ಕಾಲ ಸಾಲಿನಲ್ಲಿ ನಿಂತರೆ 1 ಅಥವಾ 5ನೇ ಕೌಂಟರ್‌ಗೆ ಹೋಗುವಂತೆ ಸೂಚಿಸಿ, ವೈದ್ಯರ ಸಹಿ ಪಡೆಯಲು ಮತ್ತೆ ಗಂಟೆಗಳ ಕಾಲ ಕಾಯಬೇಕಾಗುತ್ತದೆ. ವೈದ್ಯರ ಸಹಿ ಮತ್ತು ಮುದ್ರೆ ಪಡೆದ ನಂತರ ಔಷಧಾಲಯಕ್ಕೆ ಹೋದರೆ ಅಲ್ಲಿ ’ಸ್ಟಾಕ್ ಇಲ್ಲ’ ಎನ್ನುವ ಉತ್ತರ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಾಗಿ ದಿನವಿಡೀ ಸಂಪೂರ್ಣ ವ್ಯರ್ಥವಾಗುತ್ತದೆ.
ಔಷಧ ಲಭ್ಯವಿಲ್ಲದ ಬಗ್ಗೆ ಮೊದಲೇ ತಿಳಿಸಬಹುದಲ್ಲವೇ ಎಂದು ಕೇಳಿದರೆ, ಸಿಬ್ಬಂದಿಯಿಂದ ಅಸಮರ್ಪಕ ಪ್ರತಿಕ್ರಿಯೆ ಸಿಗುತ್ತದೆ. ಮೂರು ಬಾರಿ ಈ ರೀತಿಯ ಅನುಭವ ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.