ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ್​ ಅವರಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ವೈದ್ಯ ಚೇತನ ಪ್ರಶಸ್ತಿ' ನೀಡಿ ಗೌರವಿಸಲಾಯಿತು. 
ಉಡುಪಿ

ಡಾ. ಜಿ.ಎಸ್​. ಚಂದ್ರಶೇಖರ್​ಗೆ 'ವೈದ್ಯ ಚೇತನ ಪ್ರಶಸ್ತಿ'

* ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯರಿಗೆ ರಾಜ್ಯದ ಪ್ರತಿಷ್ಠಿತ ಪುರಸ್ಕಾರ

ಉಡುಪಿ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರ್ನಾಟಕ ರಾಜ್ಯ ಶಾಖೆಯು ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ನಿಮಿತ್ತ ನೀಡುವ ಪ್ರತಿಷ್ಠಿತ 'ವೈದ್ಯ ಚೇತನ ಪ್ರಶಸ್ತಿ'ಗೆ ಉಡುಪಿಯ ಖ್ಯಾತ ಹಿರಿಯ ವೈದ್ಯರು ಹಾಗೂ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ್​ ಭಾಜನರಾಗಿದ್ದಾರೆ.
ಬೆಂಗಳೂರಿನ ಬೆಂಗಳೂರು ಮೆಡಿಕಲ್​ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಬಸವರಾಜೇಂದ್ರ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೈದ್ಯಕಿಯ ಕ್ಷೇತ್ರದಲ್ಲಿ ತೋರಿದ ಅತ್ಯುತ್ತಮ ವೃತ್ತಿಪರ ಸಾಧನೆ, ನಿಸ್ವಾರ್ಥ ಸೇವೆ, ವೈದ್ಯಕೀಯ ನೈತಿಕತೆಯ ಪಾಲನೆ ಹಾಗೂ ಸಮಾಜದಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ ಪರಿಗಣಿಸಿ ರಾಜ್ಯಮಟ್ಟದ ಗೌರವಕ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು.
ಡಾ. ಜಿ.ಎಸ್​. ಚಂದ್ರಶೇಖರ್​ ಅವರು ಹಲವು ದಶಕಗಳಿಂದ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಸಾವಿರಾರು ರೋಗಿಗಳ ವಿಶ್ವಾಸ ಗಳಿಸಿದ್ದಾರೆ. ಅವರ ಮಾನವೀಯ ಸೇವೆ, ವೃತ್ತಿಪರ ಪ್ರಾಮಾಣಿಕತೆ ಹಾಗೂ ಸಮಾಜಮುಖಿ ಕಾರ್ಯ ಮಾದರಿಯಾಗಿದೆ. 
ಅವರ ಈ ಸಾಧನೆಗೆ ವೈದ್ಯಕೀಯ ವಲಯದ ಗಣ್ಯರು, ಸಹೋದ್ಯೋಗಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.