ಬೆಂಗಳೂರಿನ ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ ಯಶ್ಪಾಲ್ ಸುವರ್ಣ ಮಾತನಾಡಿದರು.
* ಅಧಿವೇಶನದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ಉಡುಪಿ: ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರು ಮಾಡುವಂತೆ ಗುರುವಾರ (ಮಾ.12) ಬೆಂಗಳೂರಿನ ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಚುಕ್ಕೆ ಗುರುತಿನ ಪ್ರಶ್ನೆಯಡಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಾಗಿ 29 ವರ್ಷ ಗತಿಸಿದೆ. ಮೆಡಿಕಲ್ ಕಾಲೇಜ್ ಬೇಕೆನ್ನುವುದು ಜಿಲ್ಲೆಯ ಜನರ ಹಲವು ದಶಕಗಳ ಕನಸಾಗಿದೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿಮಾರ್ಣಗೊಂಡರೆ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಬಲ ಲಭಿಸಲಿದೆ. ಜನರಿಗೂ ಸಮೀಪದಲ್ಲೇ ಗುಣಮಟ್ಟದ ಆರೋಗ್ಯ ಸೇವೆ ಲಭಿಸುವುದಲ್ಲದೆ, ಆಸಕ್ತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಉತ್ತಮ ಅವಕಾಶ ಸಿಕ್ಕಂತಾಗುತ್ತದೆ ಎಂದರು.
ಉಪ್ಪೂರಿನಲ್ಲಿದೆ ಸೂಕ್ತ ಜಾಗ
ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುಕೂಲವಾದ ಸರ್ಕಾರಿ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ಉಪ್ಪೂರು ಗ್ರಾಮದ ಸರ್ವೆ ನಂಬರ್ 293/1ಎ 1ರಲ್ಲಿ 18.80 ಎಕರೆ ಮತ್ತು 232ರಲ್ಲಿ 12 ಎಕರೆ ಜಾಗ ಈಗಾಗಲೇ ಕಾಯ್ದಿರಿಸಲಾಗಿದೆ. ಅಗತ್ಯ ಮೂಲಸೌಕರ್ಯದೊಂದಿಗೆ ಮೆಡಿಕಲ್ ಕಾಲೇಜ್ ನಿರ್ಮಿಸಲು ಅತ್ಯಂತ ಅನುಕೂಲಕರ ಹಾಗೂ ಸೂಕ್ತ ಜಾಗವಾಗಿದೆ ಎಂದರು.
ತ್ವರಿತ ಅನುಮೋದನೆ ನೀಡಿ
ರಾಜ್ಯದ ಅನೇಕ ಜಿಲ್ಲೆಗಳು ಸರ್ಕಾರಿ ಮೆಡಿಕಲ್ ಕಾಲೇಜ್ ಹೊಂದಿದೆ. ಕಳೆದ ಬಜೆಟ್ನಲ್ಲಿ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಘೋಷಿಸಲಾಗಿದೆ. ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಿಸುವುದಾಗಿ ಘೋಷಿಸಿದ್ದು, ಮಹತ್ವಾಕಾಂಕ್ಷಿ ಯೋಜನೆಯನ್ನು ಉಡುಪಿ ಜಿಲ್ಲೆಗೂ ನೀಡಬೇಕು. ರಾಜ್ಯ ಸರ್ಕಾರ ಈ ವಿಷಯಕ್ಕೆ ವಿಶೇಷ ಆದ್ಯತೆ ನೀಡಿ ತ್ವರಿತವಾಗಿ ಆಡಳಿತಾತ್ಮಕ ಅನುಮತಿ ಮತ್ತು ಅಗತ್ಯ ಅನುದಾನ ಮೀಸಲಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವರಿಗೆ ಯಶ್ಪಾಲ್ ಮನವಿ ಮಾಡಿದರು.
ಶಾಸಕ ಯಶ್ಪಾಲ್ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಶರಣ ಪ್ರಕಾಶ್ ಪಾಟೀಲ್, ಪ್ರತಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಉಡುಪಿ ಜಿಲ್ಲೆಗೂ ಸಹ ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ ಮಾಡಲು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.