ಉಡುಪಿಯ ರಾಜಾಂಗಣದಲ್ಲಿ ಸಂತ ಸಂದೇಶ ನೀಡಿದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಗೆ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿದರು. ಸುಶ್ರೀಂದ್ರ ಶ್ರೀ, ಶ್ರೀಧರ ಆಚಾರ್ಯ, ಉಪೇಂದ್ರ ಆಚಾರ್ಯ ಇತರರಿದ್ದರು.
ಗೀತೋತ್ಸವದಲ್ಲಿ ಸಂತ ಸಂದೇಶ-ಸನ್ಮಾನ
ಉಡುಪಿ: ದೇವಾರಾಧನೆಯನ್ನು ಧೂಪ, ದೀಪ, ನೈವೇದ್ಯ, ಆರತಿ ಮೂಲಕವೂ ಮಾಡಬಹುದು. ಗೀತಾ ಪ್ರಚಾರ-ಪ್ರಸಾರದ ಮೂಲಕವೂ ಮಾಡಬಹುದು. ನಮ್ಮ ಕರ್ತವ್ಯವೇ ದೇವರ ಪೂಜೆ ಆಗಿರಬೇಕು. ಉದ್ಯೋಗವೂ ಸೇರಿದಂತೆ ನಮ್ಮ ಎಲ್ಲ ಕೆಲಸವನ್ನೂ ಸಹ ದೇವರ ಪೂಜೆಯನ್ನಾಗಿಯೇ ಮಾಡಬೇಕು. ಮುಖ್ಯವಾಗಿ ನಮ್ಮ ಜೀವನವೇ ದೇವರ ಪೂಜೆ, ಆರಾಧನೆಯಂತೆ ಇರಬೇಕು ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಮುಂದುವರಿದ ಮಾಸಿಕ 'ಬೃಹತ್ ಗೀತೋತ್ಸವ'ದಲ್ಲಿ ಭಾನುವಾರ (ನ.22) ಆಯೋಜಿಸಿದ್ದ ಸಂತ- ಸಂದೇಶ-ಸಂತ -ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಗವಂತನ ಅನುಗ್ರಹ ಅಗತ್ಯ
ಸಂತ ಸಂದೇಶ ನೀಡಿದ ಆನೆಗುಂದಿ ಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಪೂರ್ವದಲ್ಲಿ ಹುಟ್ಟಿ ಬೆಳಕು ನೀಡುತ್ತ ಸಾಗಿ ಪಶ್ಚಿಮದಲ್ಲಿರುವ ಕತ್ತಲೆಯನ್ನು ಕಳೆಯುತ್ತ ಅಲ್ಲಿಯೂ ಸೂರ್ಯ ಬೆಳಕು ನೀಡುತ್ತಾನೆ. ಅದೇರೀತಿಯಲ್ಲಿ ಸುಗುಣೇಂದ್ರ ಶ್ರೀಗಳು ಭಾರತದಾದ್ಯಂತ ಗೀತಾ ಪ್ರಸಾರ ಮಾಡುತ್ತ ಹಾಗೆಯೇ ಪಶ್ಚಿಮ (ಪಾಶ್ಚಿಮಾತ್ಯ ರಾಷ್ಟ್ರ)ದತ್ತ ಸಾಗಿ ಅಲ್ಲಿಯೂ ಸೂಯೋರ್ಪಾದಿಯಲ್ಲಿ ಗೀತೆಯ ಬೆಳಕು ಪಸರಿಸಿದ್ದಾರೆ. ಸೂರ್ಯ ಭೌತಿಕ ಬೆಳಕನ್ನು ನೀಡಿದರೆ, ಜ್ಞಾನ ಭಾಸ್ಕರನಾಗಿರುವ ಸಂತರು-ಗುರುಗಳು ಜ್ಞಾನದ ಬೆಳಕು ಚೆಲ್ಲುತ್ತ ಸಾಗುತ್ತಾರೆ. ಸೂರ್ಯ ಜಗತ್ತಿನ ಕಣ್ಣು ಎನ್ನುತ್ತಾರೆ. ಆತ ಬಾಹ್ಯ ವಸ್ತು ಬೆಳಗುತ್ತಾನೆ. ಸಂತರು ಅಂತರಂಗದಲ್ಲಿ ಜ್ಞಾನವೆಂಬ ಬೆಳಕು ಹೊತ್ತಿಸುತ್ತಾರೆ. ದೈಹಿಕ ಆರೋಗ್ಯ ಬೇಕಾದಲ್ಲಿ ಸೂರ್ಯನ ಅನುಗ್ರಹ, ಮನಸ್ಸಿಗೆ ಉತ್ತಮ ಆರೋಗ್ಯ ಬೇಕಾದರೆ ಜ್ಞಾನಾಚಾರ್ಯನಾದ ಭಗವಂತನ ಅನುಗ್ರಹ ಬೇಕು. ಇಲ್ಲಿ ನಮ್ಮದೇನೂ ಇಲ್ಲ. ಭಗವಂತ ಕೊಟ್ಟಿದ್ದನ್ನೇ ಆತನಿಗೆ ಅರ್ಪಣೆ ಮಾಡಿ ಸೇವಿಸಿದರೆ ಪ್ರಸಾದವಾಗುತ್ತದೆ. ಹಾಗೆಯೇ ಸೇವಿಸಿದರೆ ಅದು ಪದಾರ್ಥವಾಗುತ್ತದೆ ಎಂದರು.
'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ಪ್ರದಾನ
ಪರ್ಯಾಯ ಪುತ್ತಿಗೆ ಮಠದಿಂದ ಸುಗುಣೇಂದ್ರ ಶ್ರೀಗಳು ಆನೆಗುಂದಿ ಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಗೆ ಹಾಗೂ ರಾಮಕೃಷ್ಣ ಆಚಾರ್ಯ, ಸಂಧ್ಯಾ ಆಚಾರ್ಯ, ಲಕ್ಷ್ಮೀನಾರಾಯಣ ಆಚಾರ್ಯ, ಚಿತ್ತರಂಜನ್ ಶೆಟ್ಟಿ ಅವರಿಗೆ 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು. ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಶ್ರೀಧರ ಆಚಾರ್ಯ ಒಡೇರಹೋಬಳಿ, ಉಪೇಂದ್ರ ಆಚಾರ್ಯ, ಮಧು ಆಚಾರ್ಯ ಮುಲ್ಕಿ, ಅಲೆವೂರು ಯೋಗೀಶ ಆಚಾರ್ಯ ಉಪಸ್ಥಿತರಿದ್ದರು.
ಕೋಟಿ ಗೀತಾ ಲೇಖನ ಯಜ್ಞದ ಪೂರ್ಣಾವಧಿ ಪ್ರಚಾರಕ ರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್, ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ, ರವೀಂದ್ರ ಆಚಾರ್ಯ ಸಹಕರಿಸಿದರು.
ಮನೆಯಲ್ಲಿ ಓರ್ವ ಮಹಿಳೆ ತನ್ನ ಮಕ್ಕಳು, ಪತಿ, ಇರುವ ಎಲ್ಲ ಹಿರಿಯರನ್ನು ಚೆನ್ನಾಗಿ ನೋಡಿಕೊಂಡರೆ ಹಾಗೂ ಮನೆಯ ಯಜಮಾನ ತನ್ನ ಕುಟುಂಬದ ಎಲ್ಲರನ್ನೂ ಚೆನ್ನಾಗಿ ನೋಡಿಕೊಂಡರೆ ಅದೂ ಸಹ ದೇವರ ಪೂಜೆಯೇ. ಮಾಡುವ ಕೆಲಸ ಕಾರ್ಯವನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದರೆ ಅದುವೇ ಸಾಧನೆ, ಅದುವೇ ದೇವರ ಸೇವೆ.