ಬೈಂದೂರಿನಲ್ಲಿ ನಿರ್ಮಾಣಗೊಳ್ಳುವ ಮೂಕಾಂಬಿಕಾ ರಸ್ತೆ ರೈಲು ನಿಲ್ದಾಣದ ನೀಲಿನಕ್ಷೆ.
ವಿಜಯವಾಣಿ ಸುದ್ದಿಜಾಲ ಬೈಂದೂರು
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಬೈಂದೂರಿನಲ್ಲಿರುವ ಮೂಕಾಂಬಿಕಾ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ವಿಶೇಷ ಮಾಸ್ಟರ್ ಪ್ಲಾೃನ್ ಸಿದ್ಧಪಡಿಸಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಅತ್ಯಾಧುನಿಕ, ಸುಸಜ್ಜಿತ ಹಾಗೂ ಕರಾವಳಿ ಭಾಗದ ಅತಿ ದೊಡ್ಡ ರೈಲು ನಿಲ್ದಾಣ ನಿರ್ಮಾಣಗೊಳ್ಳಲಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸದಸ್ಯ ಕುಂಜಾಲು ವೆಂಕಟೇಶ ಕಿಣಿ ತಿಳಿಸಿದರು.
ಇತ್ತೀಚೆಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಗುರುರಾಜ್ ಗಂಟಿಹೊಳೆ ಸಹಕಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮೂಕಾಂಬಿಕಾ ಕಾರಿಡಾರ್ ಯೋಜನೆಯಡಿ ಮೂಕಾಂಬಿಕಾ ರೋಡ್ ಬೈಂದೂರು ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಲಾಗಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈಲು ನಿಲ್ದಾಣದಲ್ಲಿ ವಿಶಾಲ ಕಟ್ಟಡ ನಿರ್ಮಾಣ, ಪಶ್ಚಿಮ ಭಾಗದಲ್ಲಿ ಒಂದು ಹಾಗೂ ಪೂರ್ವ ಭಾಗದಲ್ಲಿ ಎರಡು ಲೂಪ್ ಲೈನ್‌ಗಳನ್ನು ಒಳಗೊಂಡಂತೆ ಒಟ್ಟು ಮೂರು ಲೂಪ್‌ಲೈನ್‌ಗಳನ್ನು ನಿರ್ಮಿಸಿ ಅವುಗಳನ್ನು ಸಾಮಾನ್ಯ ಪ್ಲಾಟ್‌ಫಾರ್ಮ್‌ಗೆ ಸಂಪರ್ಕಿಸುವುದು, ಎಲ್ಲ ಪ್ಲಾಟ್‌ಫಾರ್ಮ್‌ಗಳ ಮೇಲೆ ಶೆಲ್ಟರ್ ನಿರ್ಮಾಣ, ರೈಲುಗಳಿಗೆ ನೀರಿನ ಪೂರೈಕೆ ವ್ಯವಸ್ಥೆ, ಗಂಗಾನಾಡು ರಸ್ತೆಗೆ ಅಂಡರ್‌ಪಾಸ್ ನಿರ್ಮಾಣ, ಎರಡು ಅಫ್‌ಒಬಿ ಲಿಫ್ಟ್ ನಿರ್ಮಾಣ, ಪಾರ್ಕಿಂಗ್ ಸ್ಥಳವನ್ನು ಕಲ್ಪಿಸುವುದು, ರೈಲು ನಿಲ್ದಾಣ ಸಂಪರ್ಕಿಸುವ ಉತ್ತರ ಮತ್ತು ದಕ್ಷಿಣ ಭಾಗದ ರಸ್ತೆಗಳ ವಿಸ್ತರಣೆ ಸೇರಿದಂತೆ ಹಲವು ಕಾಮಗಾರಿಗಳ ಬಗ್ಗೆ ಮಾಸ್ಟರ್ ಪ್ಲಾೃನ್ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಪ್ರಥಮ ಹಂತವಾಗಿ 100 ಕೋಟಿ ರೂ. ಅನುದಾನ ಮಂಜೂರಾಗಲಿದೆ ಎಂದರು.
ಯಾತ್ರಿ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್, ಕಾರ್ಯದರ್ಶಿ ಪ್ರಕಾಶ ಬೈಂದೂರು, ಸದಸ್ಯರಾದ ಸುಧಾಕರ, ವಿಜಯ್ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.
ಕೊಲ್ಲೂರಿಗೆ ಉಪನಗರವಾಗಿ ಬೈಂದೂರು ಬೆಳೆಯುತ್ತಿದೆ. ಹೊರ ರಾಜ್ಯಗಳಿಂದ ರೈಲಿನ ಮೂಲಕ ಆಗಮಿಸುವ ಭಕ್ತರಿಗೆ ಬೈಂದೂರು ಹೆಚ್ಚು ಅನುಕೂಲಕರ ಮತ್ತು ಹತ್ತಿರದ ನಿಲ್ದಾಣವಾಗಿದೆ. ಮೂಕಾಂಬಿಕಾ ರಸ್ತೆ ರೈಲು ನಿಲ್ದಾಣ ಕೊಲ್ಲೂರು ದೇವಾಲಯದಿಂದ 27 ಕಿ.ಮೀ. ದೂರದಲ್ಲಿದ್ದು, ಬೈಂದೂರಿನಿಂದ ಕೊಲ್ಲೂರಿಗೆ ರಾ.ಹೆ. ಮೂಲಕ ನೇರ ರಸ್ತೆ ಸಂಪರ್ಕ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸುಲಭ ಸೇವೆ ಲಭ್ಯವಿದೆ. ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಈಗಾಗಲೇ 50 ಎಕ್ಸ್‌ಪ್ರೆಸ್ ರೈಲುಗಳು ಮೂಕಾಂಬಿಕಾ ರೋಡ್ ಬೈಂದೂರಿನಲ್ಲಿ ನಿಲುಗಡೆ ನೀಡುತ್ತಿವೆ.
— ಕುಂಜಾಲು ವೆಂಕಟೇಶ ಕಿಣಿ ಗೌರವಾಧ್ಯಕ್ಷ, ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ