ಕಸ್ತೂರಿ ರಂಗನ್ ಬಾಧಿತ ತಾಲೂಕುಗಳ ಸಭೆಯಲ್ಲಿ ಕಿಶೋರ್ ಶಿರಾಡಿ ಮಾತನಾಡಿದರು. ಮಿಲನ್ ಬಾಳಿಕಳ, ದಾಮೋದರ್ ಗುಂಡ್ಯ, ಜಯಪ್ರಕಾಶ್ ಕೂಜುಗೋಡು, ರಮಾನಂದ ಎಣ್ಣೆಮಜಲು ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರು ಮತ್ತು ಸಾರ್ವಜನಿಕರು ಸಲ್ಲಿಸಿದ ಬೇಡಿಕೆಗಳಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಸ್ಪಂದಿಸದೆ ನಿರ್ಲಕ್ಷೃ ವಹಿಸಿದರೆ ಮುಂದಿನ ಹಂತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಗತ್ಯವಿದ್ದರೆ ಜೈಲ್ ಭರೋ ಹೋರಾಟ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದರು.
ಕಸ್ತೂರಿರಂಗನ್ ಅಂತಿಮ ವರದಿಯ ಕರಡು ಪ್ರತಿಗೆ ಒಕ್ಕೊರಲಿನಿಂದ ಆಕ್ಷೇಪಣೆ ಸಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಆಯೋಜಿಸಿದ್ದ ದ.ಕ. ಜಿಲ್ಲೆಯ ನಾಲ್ಕು ತಾಲೂಕುಗಳ ಬಾಧಿತ ಪ್ರದೇಶಗಳ ರೈತರು ಹಾಗೂ ಗ್ರಾಮಸ್ಥರ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಜನವಸತಿ ಪ್ರದೇಶಗಳ ರೈತರು ಮತ್ತು ಗ್ರಾಮಸ್ಥರ ಹಿತಾಸಕ್ತಿಯನ್ನು ಪರಿಗಣಿಸಬೇಕು. ಸ್ಥಳೀಯ ಜನಜೀವನ, ಕೃಷಿ ಹಾಗೂ ಮೂಲ ಸೌಲಭ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಿಶೋರ್ ಶಿರಾಡಿ ಒತ್ತಾಯಿಸಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಿಲನ್ ಬಾಳಿಕಳ, ಪ್ರಮುಖರಾದ ದಾಮೋದರ್ ಗುಂಡ್ಯ, ಜಯಪ್ರಕಾಶ್ ಕೂಜುಗೋಡು, ಈರೇಶ್ ಗೌಡ ಐತ್ತೂರು, ಉದಯ ಕುಮಾರ್ ದೇರಪ್ಪಜ್ಜನಮನೆ, ಸೀತಾರಾಮ ದೋಳ್ಪಾಡಿ, ಪಿ.ಬಿ.ಪ್ರಭಾಕರ ರೈ, ದಿವಾಕರ ಮುಂಡೋಡಿ, ಕರುಣಾಕರ ತೊಡಿಕಾನ, ಗಣೇಶ್ ಭಟ್, ಸುಬ್ರಹ್ಮಣ್ಯ ಕುಳ, ಯತೀಶ್ ಆರ್ವಾರ, ಪ್ರಮೋದ್ ಕಳಂಜ, ರಮಾನಂದ ಎಣ್ಣೆಮಜಲು, ಕುಶಾಲಪ್ಪ ಗೋಳಿತ್ತೊಟ್ಟು ಸೇರಿದಂತೆ ಸದಸ್ಯರು ಹಾಗೂ ಬೆಳ್ತಂಗಡಿ, ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪ್ರಮುಖರು ಮತ್ತು ರೈತರು ಉಪಸ್ಥಿತರಿದ್ದರು.
ವೇದಿಕೆ ಸಲ್ಲಿಸಿರುವ ಬೇಡಿಕೆಗಳಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಸ್ಪಂದಿಸದಿದ್ದರೆ ಹೋರಾಟವನ್ನು ಹಂತ-ಹಂತವಾಗಿ ತೀವ್ರಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಗ್ರಾಮಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ತಾಲೂಕುಮಟ್ಟದಲ್ಲಿ ಪ್ರತಿಭಟನೆ ನಡೆಸಿ, ತಾಲೂಕು ಕಚೇರಿಗಳ ಎದುರು ಸರ್ಕಾರದ ಗಮನ ಸೆಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಆನೆ ಕಂದಕ ನಿರ್ಮಿಸಿ
ಆನೆಗಳ ಹಾವಳಿ ನಿಯಂತ್ರಿಸಲು ಅಗತ್ಯವಿರುವ ಪ್ರದೇಶಗಳಲ್ಲಿ ಆನೆ ಕಂದಕ ನಿರ್ಮಿಸಬೇಕು. ಜನವಸತಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಆನೆಗಳನ್ನು ಸುರಕ್ಷಿತವಾಗಿ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಕ್ಕೆ ಕಳುಹಿಸಬೇಕು. ಕರಾವಳಿ ಭಾಗದ ರೈತರಿಗೆ ಯಾವುದೇ ರೀತಿಯ ತೊಂದರೆ ಅಥವಾ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಮತ್ತು ಜನವಸತಿ ಪ್ರದೇಶಗಳ ನಡುವೆ ಸ್ಪಷ್ಟವಾದ ಗಡಿ ಗುರುತು ಮಾಡುವಂತೆ ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.