pig 
ಉಡುಪಿ

ಕಾಡು ಹಂದಿಗಳ ಸಾಮೂಹಿಕ ಸಾವು

ಬೈಂದೂರು: ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಕಾಡಂಚಿನಲ್ಲಿರುವ ಅನೇಕ ಗ್ರಾಮಗಳಲ್ಲಿ ಕಾಡು ಹಂದಿಗಳ ಸಾಮೂಹಿಕ ಸಾವಿನ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕಾಡು ಹಂದಿಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ. ಪ್ರಮುಖವಾಗಿ ನಾಡ ಹಾಗೂ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾಡು ಹಂದಿಗಳು ಮೃತಪಟ್ಟಿರುವುದು ಪತ್ತೆಯಾಗಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿರುವ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಂತಿದ್ದು, ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚಿಸಲಾಗಿದೆ.

ಈಗ ಸಿಕ್ಕಿರುವ ಕಾಡು ಹಂದಿಗಳ ಮೃತದೇಹಗಳು ಕೊಳೆತಿರುವುದರಿಂದ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲು ಆಗಿಲ್ಲ. ಹಾಗಾಗಿ ಯಾರಿಗಾದರೂ ಕಾಡು ಹಂದಿಗಳ ಮೃತದೇಹ ಕಂಡುಬಂದರೆ ಕೂಡಲೇ ಸ್ಥಳೀಯ ಗ್ರಾ.ಪಂ., ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡುವಂತೆ ಹೆಮ್ಮಾಡಿ ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.
ಜನರ ಆರೋಗ್ಯದಲ್ಲಿ ಏರುಪೇರು, ಜ್ವರ ಬಂದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಅಥವಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಬೇಕು. ಎಲ್ಲ ಕಡೆಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮನೆ ಮನೆಗೆ ಹೋಗಿ ಅರಿವು ಮೂಡಿಸಲು, ಜ್ವರ ಸಮೀಕ್ಷೆ, ಆರೋಗ್ಯ ಏರುಪೇರು ಕಂಡುಬಂದಿದ್ದರೆ ವರದಿ ಮಾಡಲು ತಿಳಿಸಲಾಗಿದೆ. ಕಾಡು ಪ್ರಾಣಿಗಳ ಸಾವಿನಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕು. ಆದರೆ ಅನಗತ್ಯ ಭಯ ಬೇಡ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್ ತಿಳಿಸಿದ್ದಾರೆ.