ಪಣಕಜೆಯಲ್ಲಿ ಟೋಲ್‌ಗೇಟ್ ನಿರ್ಮಾಣ ಸ್ಥಳಕ್ಕೆ ಜಿಲ್ಲಾಮಟ್ಟದ ಟೋಲ್‌ಗೇಟ್ ತೆರವು ಹೋರಾಟ ಸಮಿತಿ ನಿಯೋಗ ಭೇಟಿ ನೀಡಿತು. ಮುನೀರ್ ಕಾಟಿಪಳ್ಳ, ರಮಾನಾಥ ರೈ, ಬಿ.ಶೇಖರ್, ಮೋಹನ್ ಶೆಟ್ಟಿ ಮತ್ತಿತರರಿದ್ದರು.
ಬೆಳ್ತಂಗಡಿ: ಭೂ ಸಾರಿಗೆ ಇಲಾಖೆಗೆ ಒಳಪಡುವ ಬಿ.ಸಿ.ರೋಡ್-ಚಾರ್ಮಾಡಿ ರಸ್ತೆಯ ಪಣಕಜೆಯಲ್ಲಿ ನಿರ್ಮಾಣವಾಗುವ ಟೋಲ್‌ಗೇಟ್ ಕಾನೂನು ಬಾಹಿರವಾಗಿದೆ. ಜಿಲ್ಲೆಯಲ್ಲಿರುವ ಕಾನೂನು ಬಾಹಿರ ಟೋಲ್‌ಗೇಟ್‌ಗಳ ವಿರುದ್ಧ ಏಪ್ರಿಲ್‌ನಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.
ಬೆಳ್ತಂಗಡಿ ತಾಲೂಕಿನ ಪಣಕಜೆಯಲ್ಲಿ ನಿರ್ಮಿಸುತ್ತಿರುವ ಟೋಲ್‌ಗೇಟ್ ಸ್ಥಳಕ್ಕೆ ಜಿಲ್ಲಾಮಟ್ಟದ ಟೋಲ್‌ಗೇಟ್ ತೆರವು ಹೋರಾಟ ಸಮಿತಿ ನಿಯೋಗದೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯ ಜನರ ಶಾಂತಿಯುತ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಜಿಲ್ಲೆಯ ಜನರ ದೌರ್ಬಲ್ಯ ಎಂದು ತಿಳಿದುಕೊಂಡಿದೆ. ನಮ್ಮ ಸಹನೆಗೂ ಮಿತಿ ಇದೆ. ಏಪ್ರಿಲ್‌ನಲ್ಲಿ ನಡೆಯುವ ಪಾದಯಾತ್ರೆ ಮೂಲಕ ನಮ್ಮ ಒಗ್ಗಟ್ಟು ಪ್ರದರ್ಶಿಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ ಎಂದರು.
ಟೋಲ್‌ಗೇಟ್ ತೆರವು ಹೋರಾಟ ಸಮಿತಿ ಸಂಚಾಲಕರಾದ ಬಿ.ಶೇಖರ್, ಮೋಹನ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಪ್ರಮುಖರಾದ ಶೇಖರ್ ಕುಕ್ಕೇಡಿ, ಪದ್ಮಶೇಖರ್ ಜೈನ್, ಕೆ.ಕೆ.ಶಾಹುಲ್ ಹಮೀದ್, ಸುರೇಶ್ ಕುಮಾರ್, ಭಾರತಿ ಪ್ರಶಾಂತ್, ಹರೀಶ್, ಶೇಖರ್, ಪದ್ಮನಾಭ ಸಾಲಿಯಾನ್, ಪ್ರವೀಣ್ ಫರ್ನಾಂಡಿಸ್, ಚಿತ್ತರಂಜನ್ ಶೆಟ್ಟಿ, ಸುದೀಪ್ ಶೆಟ್ಟಿ, ಲುಕ್ಮಾನ್, ಶಬೀರ್, ವಿನ್ಸೆಂಟ್ ಡಿಸೋಜ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸ್ ಫ್ರಾಂಕ್ ಮೊದಲಾದವರು ಇದ್ದರು.
ಪ್ರತಿ 60 ಕಿ.ಮೀ. ದೂರದಲ್ಲಿರಬೇಕಾದ ಟೋಲ್‌ಗೇಟ್‌ಗಳನ್ನು 30- 40 ಕಿ.ಮೀ. ದೂರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರಾ.ಹೆ. ಪ್ರಾಧಿಕಾರದ ಚತುಷ್ಪಥ ರಸ್ತೆಯಲ್ಲಿರಬೇಕಾದ ಟೋಲ್‌ಗೇಟ್‌ಗಳನ್ನು ಭೂ ಸಾರಿಗೆ ಇಲಾಖೆಯ ರಸ್ತೆಗಳಲ್ಲೂ ನಿರ್ಮಾಣ ಮಾಡುತ್ತಿರುವುದು ದುರಂತ. ಇದರ ವಿರುದ್ಧ ಪಕ್ಷಬೇಧ ಮರೆತು ಒಗ್ಗಟ್ಟಿನ ಹೋರಾಟ ಅಗತ್ಯ.