ಉಡುಪಿ ಪೆರಂಪಳ್ಳಿಯ ಬೆಂಕಿ ಅವಡದಲ್ಲಿ ಮನೆಯವರ ಜೀವರಕ್ಷಣೆ ಮಾಡಿದ ಮನೋಜ್, ಶರತ್ ಅವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಪ್ರಭು ಕರ್ವಾಲು, ಮನೋಜ್ ಕಡಬ, ಸೆಲ್ವರಾಜ್, ಪ್ರೀತಿ ಕಲ್ಯಾಣಪುರ, ಶೈನಿ ಸತ್ಯಭಾಮಾ, ಕೃಷ್ಣರಾಜ ತಂತ್ರಿ, ಶೆರ್ಲಿ ಮನೋಜ್ ಇದ್ದರು.
* ರಾಘವೇಂದ್ರ ಪ್ರಭು ಕರ್ವಾಲು ಶ್ಲಾಘನೆ
* ಜೀವರಕ್ಷಕರಿಗೆ ಎಸ್ಸಿಐ ಉಡುಪಿ ಸನ್ಮಾನ
ಉಡುಪಿ: ಬೆಂಕಿ ಅವಡದಲ್ಲಿ ಬಹುದೊಡ್ಡ ಅನಾಹುತ ತಪ್ಪಿಸಿ ಮನೆಯವರ ಪ್ರಾಣರಕ್ಷಣೆ ಮಾಡಿದ ಧೈರ್ಯವಂತ ಯುವಕರಿಬ್ಬರ ಸಾಹಸ ಎಲ್ಲ ಯುವಕರಿಗೂ ಸ್ಫೂರ್ತಿಯಾಗಿದೆ. ಅನಾಹುತ ಸಂಭವಿಸಿದಾಗ ಅದನ್ನು ಮೊಬೈಲ್ನಲ್ಲಿ ವೀಡಿಯೋ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಸಮಾಜದಲ್ಲಿ ತಮ್ಮ ಬದ್ಧತೆ ಅರಿತಿರುವ ಯುವಕರಿಬ್ಬರೂ ಮಾನವೀಯತೆ ಮೆರೆದಿರುವುದು ಅಭಿನಂದನಾರ್ಹ ಎಂದು ಜೇಸಿಐ ವಲಯ-15ರ ಪೂರ್ವ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಶ್ಲಾಘಿಸಿದರು.
ಸೀನಿಯರ್ ಛೇಂಬರ್ ಇಂದ್ರಾಳಿ (ಎಸ್ಸಿಐ) ಉಡುಪಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೆರಂಪಳ್ಳಿಯಲ್ಲಿ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿಟ್ಟಿದ್ದ ಇಲೆಕ್ಟ್ರಿಕ್ ಆಟೋದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು, ಆ ಮನೆಯಲ್ಲಿದ್ದರವರ ಜೀವಕ್ಕೂ ಆಪತ್ತು ಉಂಟಾಗಿದ್ದಾಗ ಜೀವದ ಹಂಗು ತೊರೆದು ಮನೆಯವರ ಪ್ರಾಣ ಕಾಪಾಡಿದ ಮನೋಜ್ ಮತ್ತು ಶರತ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಸಿವಿಲ್ ಇಂಜಿನಿಯರ್ ಮನೋಜ್ ಮತ್ತು ಹಿಮವರ್ಣಂ ಏಶಿಯನ್ ಪೈಂಟ್ನ ಯುವ ಉದ್ಯಮಿ ಶರತ್ ಮಾತನಾಡಿ, ಮನೆಯವರ ಬೊಬ್ಬೆ ಕೇಳಿದ್ದರಿಂದ ಅಲ್ಲಿಗೆ ಧಾವಿಸಿ ನಮ್ಮಿಂದಾದ ರಕ್ಷಣಾ ಕಾರ್ಯ ಮಾಡಿದ್ದೇವೆ ಎಂದು ತಿಳಿಸಿದರು.
ಎಸ್ಸಿಐ ಉಡುಪಿ ಅಧ್ಯಕ್ಷ ಮನೋಜ್ ಕಡಬ ಸ್ವಾಗತಿಸಿದರು. ಕಾರ್ಯದರ್ಶಿ ಸೆಲ್ವರಾಜ್ ವಂದಿಸಿದರು. ಪದಾಧಿಕಾರಿಗಳಾದ ಪ್ರೀತಿ ಕಲ್ಯಾಣಪುರ, ಶೈನಿ ಸತ್ಯಭಾಮಾ, ಕೃಷ್ಣರಾಜ ತಂತ್ರಿ, ಶೆರ್ಲಿ ಮನೋಜ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರು-ಬೈಕ್, ಮನೆಯವರ ರಕ್ಷಣೆ
ಕಳೆದ ಆ.23ರಂದು ಪೆರಂಪಳ್ಳಿಯಲ್ಲಿ ಇಲೆಕ್ಟ್ರಿಕ್ ಆಟೋ ಬೆಂಕಿಯಿಂದ ಹೊತ್ತಿ ಉರಿದಿದ್ದಲ್ಲದೆ ಪಕ್ಕದಲ್ಲೇ ಇದ್ದ ಕಾರು, ಬೈಕ್ಗೂ ವ್ಯಾಪಿಸಿತ್ತು. ಅದನ್ನು ಕಂಡು ಆತಂಕಕ್ಕೊಳಗಾದ ಮನೆಯವರು ತಮ್ಮ ಜೀವಕ್ಕೂ ಅಪಾಯವಾಗಲಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಈ ವೇಳೆ ತನ್ನ ಸೈಟ್ನಲ್ಲಿ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದ ಇಂಜಿನಿಯರ್ ಮನೋಜ್, ಕೂಡಲೇ ಆ ಮನೆಯತ್ತ ಧಾವಿಸಿ ಕಾರು ಹಾಗೂ ಬೈಕ್ಗೆ ಆವರಿಸಿದ್ದ ಬೆಂಕಿ ನಂದಿಸಿ ಅವುಗಳನ್ನು ಸುರಕ್ಷಿತವಾಗಿ ಹೊರಗಡೆ ತಂದರು. ಬೆಂಕಿ ಅವಡವನ್ನು ಕಂಡ ಉದ್ಯಮಿ ಶರತ್ ಅವರೂ ಸಹ ಆಗಮಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಕೈಜೋಡಿಸಿದರು. ಅವರಿಬ್ಬರೂ ಸಹ ತಮ್ಮ ಜೀವವನ್ನೂ ಲೆಕ್ಕಿಸದೆ ಆ ಮನೆಯವರ ಆಸ್ತಿ-ಪಾಸ್ತಿ ಹಾಗೂ ಕುಟುಂಬದವರ ಜೀವರಕ್ಷಣೆ ಮಾಡಿದ್ದರು.