ಕೇರಳದಲ್ಲಿ ಕಾರ್ಯನಿರ್ವಹಿಸುವ ಕೆಎಸ್ಸಾರ್ಟಿಸಿ ಸಾಮಾನ್ಯ ಬಸ್. 
ಉಡುಪಿ

ಮಂಜೇಶ್ವರಕ್ಕಿಲ್ಲ ಪ್ರಿಯದರ್ಶಿನಿ ಭಾಗ್ಯ!

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಯುಡಿಎಫ್ ಸರ್ಕಾರದ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳಲ್ಲೊಂದಾದ ‘ಇಂದಿರಾ ಗ್ಯಾರಂಟಿ’ಯಲ್ಲಿರುವ ಐದು ಯೋಜನೆಗಳಲ್ಲಿ ಒಂದನ್ನು ಜೂ.15ರಂದು ಜಾರಿಗೆ ತರಲಾಗುತ್ತಿದೆ. ಕೆಎಸ್ಸಾರ್ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಯಾವುದೇ ಷರತ್ತುಗಳಿಲ್ಲದೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ‘ಪ್ರಿಯದರ್ಶಿನಿ’ ಯೋಜನೆ ಸೋಮವಾರದಿಂದ ಪ್ರಾರಂಭವಾಗಲಿದೆ.
ಸಿಎಂ ವಿ.ಡಿ.ಸತೀಶನ್ ಯೋಜನೆ ಉದ್ಘಾಟಿಸಲಿದ್ದಾರೆ. ಯೋಜನೆ ಪ್ರಯೋಜನ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರದ ಬಹುದೊಡ್ಡ ಭಾಗಕ್ಕೆ ಲಭ್ಯವಿಲ್ಲ. ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳಲ್ಲಿ ಕೆಎಸ್ಸಾರ್ಟಿಸಿ ಸಾಮಾನ್ಯ ಬಸ್‌ಗಳ ಕೊರತೆ ಕಾರಣ ಈ ಪ್ರದೇಶಗಳ ಜನರಿಗೆ ಈ ಯೋಜನೆ ನಿಷ್ಪ್ರಯೋಜಕವಾಗಿದ್ದು, ಸ್ಥಳೀಯ ಯುಡಿಎಫ್ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ತುರ್ತು ಪರಿಹಾರಕ್ಕೆ ಒತ್ತಾಯ
ಕ್ಷೇತ್ರದ ಯುಡಿಎಫ್ ನಾಯಕರು ಸರ್ಕಾರ ಮತ್ತು ನಾಯಕತ್ವದ ವಿಷಯದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ವಿನಂತಿಸಿದ್ದಾರೆ. ಶಾಸಕ ಎ.ಕೆ.ಎಂ. ಅಶ್ರಫ್ ಈ ಹಿಂದೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು.

ಆದಾಯ ನಷ್ಟಕ್ಕೆ ಜಾಹೀರಾತು ಸಂಗ್ರಹಣೆ

ಉಚಿತ ಪ್ರಯಾಣ ಯೋಜನೆ ಮೂಲಕ ಕೆಎಸ್ಸಾರ್ಟಿಸಿಗೆ ತಿಂಗಳಿಗೆ 50 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಲಿದೆ ಎಂದು ಅಧಿಕೃತ ಅಂಕಿ ಅಂಶ ಸೂಚಿಸುತ್ತವೆ. ಈ ಮೊತ್ತ ಸರಿದೂಗಿಸುವ ಪ್ರಯತ್ನ ಸರ್ಕಾರ ಪ್ರಾರಂಭಿಸಿದ್ದು, ಇದರ ಭಾಗವಾಗಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಟಿವಿ ಅಳವಡಿಸುವ ಮೂಲಕ ಮತ್ತು ಇತರ ವಿಧಾನಗಳ ಮೂಲಕ ಜಾಹೀರಾತು ಆದಾಯ ಸಂಗ್ರಹಿಸಬಹುದು ಎಂದು ಸರ್ಕಾರ ಅಂದಾಜಿಸಿದೆ.

ಅಧಿಕಾರಿಗಳಿಗೆ ವಿಶೇಷ ಸೂಚನೆ


ಮುಖ್ಯಮಂತ್ರಿ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಇತರ ಮಾರ್ಗಗಳ ಬಗ್ಗೆ ಯೋಚಿಸಲು ವಿಶೇಷ ಸೂಚನೆ ನೀಡಿದ್ದಾರೆ. ಇದರ ಜತೆಗೆ, ಮಲಬಾರ್‌ಗೆ ಹೆಚ್ಚಿನ ಸಾಮಾನ್ಯ ಬಸ್ ಅನುಮತಿಸುವ ಬಗ್ಗೆ ಸರ್ಕಾರ ಪರಿಗಣಿಸುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ. ಮಂಜೇಶ್ವರದ ಜನರಿಗೆ ಇದು ಪ್ರಸ್ತುತ ಏಕೈಕ ಪರಿಹಾರವಾಗಲಿದ್ದು, ಯಾವುದೇ ಸಂದರ್ಭದಲ್ಲಿ ‘ಇಂದಿರಾ ಗ್ಯಾರಂಟಿ’ ಅನುಷ್ಠಾನ ಜನರಲ್ಲಿ ಯುಡಿಎಫ್ ಸರ್ಕಾರದ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.

ನೂತನ ಸರ್ಕಾರದ ಸ್ತ್ರೀಯರ ಉಚಿತ ಸೇವೆ ಮಂಜೇಶ್ವರ ತಾಲೂಕಿಗೆ ಲಭ್ಯವಾಗದಿರುವುದು ಸ್ವೀಕಾರಾರ್ಹವಲ್ಲ. ಈ ಹಿನ್ನೆಲೆ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮೌಖಿಕವಾಗಿ ಮನವಿ ಮಾಡಲಾಗಿದೆ.

— ರಹ್ಮಾನ್ ಉದ್ಯಾವರ, ಪ್ರಧಾನ ಕಾರ್ಯದರ್ಶಿ ಗ್ರಾಹಕರ ವೇದಿಕೆ ಮಂಜೇಶ್ವರ