ಗುಡ್ಡ ಕುಸಿದು ಮೂರು ಜೀವ ಬಲಿ ಪಡೆದ ಮಂಜನಾಡಿ ಮನೆ.
ಉಳ್ಳಾಲ: ಒಂದು ವರ್ಷ ಕಳೆದರೂ, ತಮ್ಮವರನ್ನು ಕಳೆದುಕೊಂಡು, ಅಂಗವೈಕಲ್ಯಕ್ಕೆ ತುತ್ತಾಗಿ ಕಣ್ಣೀರಿನಲ್ಲಿಯೇ ದಿನದೂಡುತ್ತಿರುವ ಆ ಸಂತ್ರಸ್ತ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಮಂಜನಾಡಿ ಗ್ರಾಮದ ಕೊಪ್ಪಲದಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತ ಕೇವಲ ನೈಸರ್ಗಿಕ ವಿಕೋಪವಾಗಿರಲಿಲ್ಲ, ಬದಲಾಗಿ ಅದು ಮನುಷ್ಯನ ಅವೈಜ್ಞಾನಿಕ ಕಾಮಗಾರಿಗೆ ಬಲಿಯಾದ ಅಮಾಯಕರ ರಕ್ತದ ಕಲೆ...
ಕರುಣಾಜನಕ ದುರಂತದ ಹಿನ್ನೆಲೆ
ಕಳೆದ ವರ್ಷದ ಮೇ ತಿಂಗಳ ಆ ಕರಾಳ ನಸುಕಿನಲ್ಲಿ, ಮುಗ್ಧ ಕನಸುಗಳೊಂದಿಗೆ ಗಾಢ ನಿದ್ದೆಯಲ್ಲಿದ್ದ ಕುಟುಂಬದ ಮೇಲೆ ಮನೆಯ ಹಿಂಭಾಗದ ಗುಡ್ಡ ಅಪ್ಪಳಿಸಿತ್ತು. ಇನ್ನೇನು ಶಾಲೆಯ ಮೆಟ್ಟಿಲೇರಬೇಕಿದ್ದ 2.5 ವರ್ಷದ ಆರ್ಯನ್, 1 ವರ್ಷದ ಹಸುಗೂಸು ಆರುಶ್ ಹಾಗೂ ಆ ಕಂದಮ್ಮಗಳ ಬಗ್ಗೆ ನೂರೆಂಟು ಕನಸು ಕಂಡಿದ್ದ ಅಜ್ಜಿ ಪ್ರೇಮಾ (58) ಮಣ್ಣಿನಡಿಯಲ್ಲಿಯೇ ಶಾಶ್ವತವಾಗಿ ಉಸಿರು ಚೆಲ್ಲಿದ್ದರು. ಬದುಕುಳಿದರೂ ಬದುಕೇ ನರಕವಾಗಿರುವ ತಾಯಿ ಅಶ್ವಿನಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರೆ, ವೃದ್ಧ ಕಾಂತಪ್ಪ ಪೂಜಾರಿ ತಮ್ಮ ಒಂದು ಕಾಲನ್ನು ಕಳೆದುಕೊಂಡು ಅಸಹಾಯಕರಾಗಿದ್ದಾರೆ.
ನ್ಯಾಯಕ್ಕಾಗಿ ಕಾತರ
ಈ ದುರಂತಕ್ಕೆ ‘ಅವೈಜ್ಞಾನಿಕ ರಸ್ತೆ ನಿರ್ಮಾಣವೇ’ ಕಾರಣ ಎಂದು ಆರೋಪಿಸಿ ಅಶ್ವಿನಿ ಕಾನೂನು ಹೋರಾಟಕ್ಕಿಳಿದಿದ್ದಾರೆ. ಎನ್‌ಐಟಿಕೆ ವರದಿ ಕೂಡ ಅವರ ಆರೋಪಕ್ಕೆ ಬಲ ತುಂಬಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವುದರಿಂದ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಶಾಶ್ವತ ಪರಿಹಾರ ಸವಾಲು
ಜಾಗ ಖಾಸಗಿಯವರ ಒಡೆತನದಲ್ಲಿರುವ ಕಾರಣ ಸರ್ಕಾರದಿಂದ ಶಾಶ್ವತ ಪರಿಹಾರ ಕಲ್ಪಿಸುವುದು ಸವಾಲಾಗಿದೆ. ಮಳೆಗಾಲ ಬರುತ್ತಿದ್ದಂತೆ ಅಧಿಕಾರಿಗಳು ‘ಕಾಳಜಿ ಕೇಂದ್ರಗಳಿಗೆ ತೆರಳಿ’ ಎಂದು ಎಚ್ಚರಿಕೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆಯೇ ಹೊರತು, ಒಡಲ ಕರುಳನ್ನು ಕಳೆದುಕೊಂಡು, ಕಾಲುಗಳಿಲ್ಲದೆ ನರಳುತ್ತಿರುವ ಆ ಜೀವಗಳಿಗೆ ಇದುವರೆಗೂ ಶಾಶ್ವತ ಸೂರು ಹಾಗೂ ನ್ಯಾಯದ ಸಾಂತ್ವನ ದೊರೆತಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಂಡು, ಆ ಕುಟುಂಬಕ್ಕೆ ಆಸರೆಯಾಗಬೇಕಾದ ವ್ಯವಸ್ಥೆ ಇನ್ನೂ ಮೌನವಾಗಿದೆ.
ಕಾಂತಪ್ಪ ಪೂಜಾರಿಯವರ ಕುಟುಂಬ ಹಲವಾರು ವರ್ಷಗಳಿಂದ ಇದೇ ಮನೆಯಲ್ಲಿ ವಾಸವಿದ್ದರು. ಹಿಂದೆ ಭೀಕರ ಮಳೆಯಿಂದ ಯಾವುದೇ ಅಪಾಯ ಆಗಿರಲಿಲ್ಲ. ಇಲ್ಲಿ ಮೂರು ಮನೆಗಳಿದ್ದು ರಸ್ತೆಯ ಬೇಡಿಕೆಯನ್ನಾಧರಿಸಿ 2007ರಲ್ಲಿ ನಿರ್ಮಿಸಲಾಗಿದ್ದು ಮರಗಳ ಜತೆ ಗುಡ್ಡ ಕುಸಿದಿದೆ. ಮಣ್ಣು ತೆರವು ನಿಟ್ಟಿನಲ್ಲಿ ಶ್ರಮದಾನಕ್ಕೆ ಸ್ಥಳೀಯರು ಸಿದ್ಧರಿದ್ದರೂ ತನಿಖೆಯಲ್ಲಿರುವುದರಿಂದ ಸಾಧ್ಯವಾಗಿಲ್ಲ.
ರಸ್ತೆ ನಿರ್ಮಿಸಿದ ಸಂದರ್ಭ ನೀರು ಹರಿದು ಹೋಗಲು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಗುಡ್ಡ ಕುಸಿತ ಸಂಭವಿಸಿದೆ. ಈ ಬಗ್ಗೆ ಜಿಪಂ ಸಿಒ, ಎನ್‌ಐಟಿಕೆ ಅಧಿಕಾರಿಗಳು ಪರಿಶೀಲಿಸಿ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಉಲ್ಲೇಖಿಸಿದರೂ ಗ್ರಾಪಂ, ಇಂಜಿನಿಯರ್ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಬಿಎನ್ ಎಸ್‌ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕಮಿಷನರ್‌ಗೆ ಮನವಿ ಮಾಡಲಾಗಿದೆ.