ಅಂತರರಾಜ್ಯ ಟ್ಯಾಟೂ 313 ಗ್ಯಾಂಗ್​ ಕಳ್ಳರು.  
ಉಡುಪಿ

ಅಂತರರಾಜ್ಯ ಟ್ಯಾಟೂ 313 ಗ್ಯಾಂಗ್​ ಕಳ್ಳರ ಬಂಧನ

ಉಡುಪಿ: ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕ ವ್ಯಾಪ್ತಿಯ ಕುಖ್ಯಾತ ಅಂತರರಾಜ್ಯ ಮುಸುಕುಧಾರಿ ಟ್ಯಾಟೂ 313 ಗ್ಯಾಂಗ್​ನ ಇಬ್ಬರು ಕಳ್ಳರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದು, 7.90 ಲಕ್ಷ ರೂ ಮೌಲ್ಯದ 60 ಗ್ರಾಂ ಚಿನ್ನಾಭರಣ ಹಾಗೂ 2 ಮೊಬೈಲ್​ ಫೋನ್​ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಸಿಂಗಸಂದ್ರ ವಾರ್ಡ್​ ನಿವಾಸಿ ದರ್ಶನ್​ ಆರ್​. (21), ದಾವಣಗೆರೆ ಬಸವನಹಾಳ ಗೊಲ್ಲರಹಟ್ಟಿ ನಿವಾಸಿ ಚಂದ್ರು (26) ಬಂಧಿತರು.
ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ನಿವಾಸಿ ಅಮಿತಾ ಡ್ಯಾನಿಯಲ್​ ಎಂಬುವವರು ಫೆ. 3ರಂದು ಮನೆಗೆ ಬೀಗ ಹಾಕಿ ತಾಯಿ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 7 ಲಕ್ಷ ರೂ. ಮೌಲ್ಯದ 75 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾತ್ರಿ ರೌಂಡ್ಸ್​ ವೇಳೆ ಸಿಕ್ಕಿಬಿದ್ದ ಖದೀಮರು
ಜೂನ್​ 6ರಂದು ರಾತ್ರಿ ಮಣಿಪಾಲ ಪಿಎಸ್​ಐ ಶಂಭುಲಿಂಗಯ್ಯ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ರವಿರಾಜ್​ ಮತ್ತು ಮಂಜುನಾಥ್​ ರೌಂಡ್ಸ್​ ಕರ್ತವ್ಯದಲ್ಲಿದ್ದಾಗ, ಇಂದ್ರಾಳಿ ರೈಲ್ವೆ ಗೋಡೌನ್​ ರಸ್ತೆ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ತಡೆದು ತಪಾಸಣೆ ನಡೆಸಿದಾಗ ಬಾಗಿಲು ಮುರಿಯುವ ಕಬ್ಬಿಣದ ಆಯುಧಗಳು ಪತ್ತೆಯಾಗಿವೆ. ತೀವ್ರ ವಿಚಾರಣೆ ನಡೆಸಿದಾಗ, ತಾವು ರೈಲ್ವೆ ಹಳಿಗಳ ಆಸುಪಾಸಿನ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಕುಂಜಿಬೆಟ್ಟು ಕಳ್ಳತನ ಪ್ರಕರಣದ ಬಗ್ಗೆಯೂ ಬಾಯಿಬಿಟ್ಟಿದ್ದಾರೆ.

ಶಿವಮೊಗ್ಗದ ಲಾಡ್ಜ್​ನಲ್ಲಿಟ್ಟಿದ್ದ ಚಿನ್ನಾಭರಣ ಪತ್ತೆ
ಬಳಿಕ ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಿ ಪೊಲೀಸ್​ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದ್ದು, ಆರೋಪಿಗಳು ತಾವು ಕದ್ದ ಚಿನ್ನಾಭರಣಗಳನ್ನು ಶಿವಮೊಗ್ಗದ ಲಾಡ್ಜ್​ ಒಂದರಲ್ಲಿ ರೂಮ್​ ಮಾಡಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾರೆ. ತಕ್ಷಣ ಶಿವಮೊಗ್ಗಕ್ಕೆ ತೆರಳಿದ ಪೊಲೀಸರು 39.70 ಗ್ರಾಂ ತೂಕದ 5. 6 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರ, 1.86 ಲಕ್ಷ ರೂ. ಮೌಲ್ಯದ 13.30 ಗ್ರಾಂ ತೂಕದ ಚಿನ್ನದ ನೆಕ್ಲೆಸ್​, 44,000 ಮೌಲ್ಯದ 3.15 ಗ್ರಾಂ ತೂಕದ ಚಿನ್ನದ ಕಿವಿಯೋಲೆ, 54,000 ಮೌಲ್ಯದ 3.87 ಗ್ರಾಂ ಚಿನ್ನದ ಚೈನ್​ ವಶಪಡಿಸಿಕೊಂಡಿದ್ದಾರೆ. ಈ ಜಾಲದಲ್ಲಿ ಭಾಗಿಯಾಗಿರುವ ಇನ್ನುಳಿದ ಇಬ್ಬರು ಪ್ರಮುಖ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.