ಮಾಹೆ ಪ್ರೊ. ಚಾನ್ಸಲರ್ ಡಾ. ಎಚ್.ಎಸ್. ಬಲ್ಲಾಳ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು,
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಶ್ರಯದಲ್ಲಿ ಹಸಿರುಭರಿತ, ಸುಸ್ಥಿರ ನಾಳಿನ ಭವಿಷ್ಯಕ್ಕಾಗಿ ಓಟ ಎಂಬ ಧ್ಯೇಯವಾಕ್ಯದೊಂದಿಗೆ ಮಣಿಪಾಲ ಕೆಎಂಸಿ ಗ್ರೀನ್ಸ್ನಲ್ಲಿ 8ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ ಫೆ. 8ರಂದು ಆಯೋಜಿಸಲಿದೆ ಎಂದು ಮಾಹೆ ಪ್ರೊ. ಚಾನ್ಸಲರ್ ಡಾ. ಎಚ್.ಎಸ್. ಬಲ್ಲಾಳ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 42 ಕಿಮೀ ಫುಲ್ ಮ್ಯಾರಥಾನ್, 21 ಕಿಮೀ ಹಾಫ್ ಮ್ಯಾರಥಾನ್, 10 ಕಿಮೀ , 5 ಕಿಮೀ ಮತ್ತು 3 ಕಿಮೀ ಫನ್ ರನ್ ಐದು ರೇಸ್ ವಿಭಾಗಗಳನ್ನು ಒಳಗೊಂಡಿದೆ. ಮಣಿಪಾಲ್ ಮ್ಯಾರಥಾನ್ನಲ್ಲಿ 100ಕ್ಕೂ ಅಧಿಕ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ 20,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಲಿದ್ದಾರೆ. ದುಬೈ, ಇಂಗ್ಲೆಂಡ್, ಇಥಿಯೋಪಿಯಾ, ಜರ್ಮನಿ, ಜಪಾನ್, ಕೀನ್ಯಾ, ಮಲೇಷ್ಯಾ, ನೇಪಾಳ, ಶ್ರೀಲಂಕಾ ಮೊದಲಾದ ದೇಶಗಳಿಂದಲೂ ಓಟಗಾರರು ಪಾಲ್ಗೊಳ್ಳಲಿದ್ದಾರೆ. ವಿವಿಧ ವಿಭಾಗಗಳಲ್ಲಿ ವಿಜೇತರಿಗೆ 25 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನ ವಿತರಿಸಲಾಗುವುದು ಎಂದರು.
ಕ್ರೀಡಾ ವಿಭಾಗ ಕಾರ್ಯದರ್ಶಿ ಡಾ. ವಿನೋದ್ ಸಿ. ನಾಯಕ್ ಮಾತನಾಡಿ, ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ಓಟದ ದಿನ ಬೆಳಗ್ಗೆ 5 ಗಂಟೆಗೆ 42 ಕಿಮೀ ಪೂರ್ಣ ಮ್ಯಾರಥಾನ್ ಪ್ರಾರಂಭವಾಗುತ್ತದೆ. 5:30 ಕ್ಕೆ 21 ಕಿಮೀ ಹಾಫ್ ಮ್ಯಾರಥಾನ್, 6ಕ್ಕೆ 10 ಕಿಮೀ ಓಟ, 6:45 ಕ್ಕೆ 5 ಕಿಮೀ ಓಟ ಮತ್ತು 8ಕ್ಕೆ 3 ಕಿಮೀ ಮೋಜಿನ ಓಟ ನಡೆಯಲಿದೆ. ದೈಹಿಕವಾಗಿ ಮತ್ತು ದೃಷ್ಟಿ ವಿಕಲಚೇತನರಿಗಾಗಿ ವಿಶೇಷ ವಿಭಾಗದ ಓಟಗಳಿಗೆ ಬೆಳಿಗ್ಗೆ 8:30ಕ್ಕೆ ಚಾಲನೆ ನೀಡಲಾಗುವುದು ಎಂದರು.
ಮಣಿಪಾಲ್ ಮ್ಯಾರಥಾನ್ನ ಪ್ರಮುಖ ವಿಶೇಷತೆಯೆಂದರೆ 42ಕಿಮೀ ಪೂರ್ಣ ಮ್ಯಾರಥಾನ್ ಸುಂದರವಾದ ಕಡಲತೀರದ ಮಾರ್ಗವನ್ನು ಹೊಂದಿದ್ದು, ಓಟಗಾರರಿಗೆ ವಿಶಿಷ್ಟವಾದ ಓಟದ ಅನುಭವವನ್ನು ನೀಡುತ್ತದೆ. 10 ಕಿಮೀ ಓಟವು ಹಾವಂಜೆಯ ಮಣಿಪಾಲ್ ಹಾಸ್ಪಿಸ್ ಕೇಂದ್ರ ಸಮೀಪ ಸಾಗಿ ಬರಲಿದೆ. ಮಣಿಪಾಲ್ ಮ್ಯಾರಥಾನ್ 2026ಕ್ಕೆ ನೋಂದಣಿ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.
ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ಉಪಕುಲಾಧಿಪತಿಗಳಾದ ಡಾ. ನಾರಾಯಣ ಸಭಾಹಿತ್, ಡಾ. ಶರತ್ ರಾವ್, ಡಾ. ಮಧು ವೀರರಾಘವನ್, ಡಾ. ದಿಲೀಪ್ ಜಿ. ನಾಯಕ್, ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್, ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ ಉಪಸ್ಥಿತರಿದ್ದರು.