ಉಡುಪಿ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಹಾಗೂ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಪಟಾಕಿ ಎಸೆದು ಪುಂಡಾಟ ನಡೆಸಿದ ಐವರು ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಜನರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ಯನ್ ಕುಮಾರ್, ಆದಿತ್ಯ ಪ್ರಜಾಪತಿ, ಪ್ರಿಯಾಂಶ್, ಸಿದ್ದಾಂತ್ ಸಿಂಗ್, ಪ್ರಿಯಜಿತ್ ಸಿಂಗ್ ಹಾಗೂ ಇತರ 15 ಜನರು ಆರೋಪಿತರಾಗಿದ್ದಾರೆ.
ಭಾನುವಾರ ಮಾಂಡವಿ ಎಮರಾಲ್ಡ್ ಅಪಾರ್ಟ್ಮೆಂಟ್ ಎದುರಿನ ಸಾರ್ವಜನಿಕ ರಸ್ತೆಯಲ್ಲಿ 15 ರಿಂದ 20 ಜನರ ಗುಂಪು ಸೇರಿಕೊಂಡು ಅಪಾಯಕಾರಿ ರೀತಿಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಕೈಯಲ್ಲಿ ಪಟಾಕಿ ಹಿಡಿದುಕೊಂಡು ರಸ್ತೆಯಲ್ಲಿ ಹಾದುಹೋಗುತ್ತಿದ್ದ ಸಾರ್ವಜನಿಕರ ಮೇಲೆ, ವಾಹನ ಸವಾರರ ಹಾಗೂ ವಾಹನಗಳ ಮೇಲೆಯೇ ಪಟಾಕಿ ತೂರಲಾಗುತ್ತಿತ್ತು. ಇದರಿಂದ ಸಾರ್ವಜನಿಕರಾದ ಅನಿಲ್, ಕೀರ್ತಿ, ಡೆನಿಸ್ ರವಿಶೆಟ್ಟಿ ಹಾಗೂ ಜ್ಞಾನೇಶ್ವರ್ ಎಂಬವರು ತೊಂದರೆಗೊಳಗಾಗಿದ್ದರು. ಈ ಮಾಹಿತಿ ತಿಳಿದ ಮಣಿಪಾಲ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು. ಈ ವೇಳೆ ಸಮವಸ್ತ್ರದಲ್ಲಿದ್ದ ಪೊಲೀಸರು ಸೂಚನೆ ನೀಡಿದರೂ ಅದನ್ನು ಲೆಕ್ಕಿಸದ ಪುಂಡರು, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಪಟಾಕಿ ಎಸೆದು ಬೆದರಿಕೆ ಹಾಕಿದ್ದಾರೆ. ಘಟನೆಗೆ ಸಂಬಂಧಿಸಿ ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ಶಂಭುಲಿಂಗಯ್ಯ ನೀಡಿರುವ ದೂರಿನಂತೆ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.