ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾವು ಮೇಳಕ್ಕೆ ಚಾಲನೆ ನೀಡಿದರು.
ಉಡುಪಿ: ರಾಮನಗರ ಜಿಲ್ಲೆಯ ರೈತರು ಬೆಳೆಸಿದ ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಈ ಮೇಳ ವೇದಿಕೆಯಾಗಿದೆ. ಇದು ಕೇವಲ ಮಾರಾಟವಲ್ಲ ಮಾತ್ರವಲ್ಲದೆ ರೈತರ ಶ್ರಮ ಮತ್ತು ಮಣ್ಣಿನ ಸುವಾಸನೆಯನ್ನು ಜನರಿಗೆ ತಲುಪಿಸುವ ಪ್ರಯತ್ನ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತೋಟಗಾರಿಕೆ ಇಲಾಖೆ ಅಶ್ರಯದಲ್ಲಿ ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘ ಸಹಯೋಗದಲ್ಲಿ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಮೇ 14 ರಿಂದ 17 ರವರೆಗೆ ಆಯೋಜಿಸಲಾದ ಮಾವು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೇಳದಲ್ಲಿ ಸುಮಾರು 12 ರಿಂದ 15 ವಿವಿಧ ತಳಿಗಳ ಮಾವಿನ ಹಣ್ಣುಗಳು ಲಭ್ಯವಿವೆ. ರಾಮನಗರ ಜಿಲ್ಲೆಯ ವಿವಿಧ ತಳಿಗಳ ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣುಗಳನ್ನು ನೇರವಾಗಿ ಬೆಳೆಗಾರರಿಂದ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು.
ℹ️ ಬಗೆ ಬಗೆ ಮಾವಿನ ಹಣ್ಣಿನ ಸ್ವಾದ
ರಾಮನಗರದಿಂದ ಆಗಮಿಸಿದ 10 ಮಂದಿ ರೈತರು ತಮ್ಮ ಮಾವಿನ ಬೆಳೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮಲ್ಲಿಕಾ 1.5 ಟನ್, ಕೇಸರ್ 600 ಕೆ.ಜಿ., ಇಮಾಮ್ಪಸಂದ್ 1 ಟನ್, ರಸಪುರಿ 500 ಕೆ.ಜಿ., ಸಿಂಧೂರ 500 ಕೆ.ಜಿ., ಸುಂದರಿ 200 ಕೆ.ಜಿ., ಆಲ್ಫೋನ್ಸೋ 4 ಟನ್, ತೋತಾಪುರಿ 100 ಕೆ.ಜಿ., ಕಲಾಪಾಡ್ 500 ಕೆ.ಜಿ., ಸಕ್ಕರೆಗುತ್ತಿ 500 ಕೆ.ಜಿ., ಮಲಗೊವ 1 ಟನ್, ದಸೇರಿ 1 ಟನ್ ಸೇರಿ ಒಟ್ಟು 11.4 ಟನ್ ಮಾವಿನ ಹಣ್ಣುಗಳನ್ನು ತರಲಾಗಿದೆ. ಸಂದಲ್ಲಿ ಸುಮಾರು 1350 ಮಂದಿ ಸದಸ್ಯರಿದ್ದು, 27 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಯಾವುದೇ ರಾಸಾಯನಿಕ ಬೆರೆಸದೆ ಮಾಗಿಸಿದ ರುಚಿಯಾದ ಮಾವಿನ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿವೆ.
ತೋಟಗಾರಿಕೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ ಹೇಮಂತ್ ಕುಮಾರ್ ಬೀಳಗಿ, ಸಹಾಯಕ ನಿರ್ದೇಶಕರಾದ ನಿಧೀಶ್, ವರುಣ್, ಕುಮಾರ್, ಗುರುಪ್ರಸಾದ್, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.