ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ವಾರ್ಪ್ ದುಸ್ಥಿತಿಯಿಂದ ನಲುಗಿದೆ. ಮೀನುಗಾರರ ಪಾಲಿಗೆ ಸದ್ಯದ ಆಸರೆ ತಾಣ ನೆಲಕಚ್ಚುವ ಸ್ಥಿತಿಯಲ್ಲಿದೆ.
ಮ್ಯಾಂಗನೀಸ್ ವಾರ್ಪ್‌ನಲ್ಲಿ ರಫ್ತು ವಹಿವಾಟು ಸಹಿತ ಹೆಂಚು, ಇನ್ನಿತರ ಸಾಮಗ್ರಿ ಸರಂಜಾಮುಗಳು ಇಲ್ಲಿಂದ ನಾನಾ ದೇಶಗಳಿಗೆ ಸಾಗಾಟ ಆಗುತ್ತಿತ್ತು. ಶತವಾನಗಳ ಹಿಂದಿನ ವಾರ್ಪ್‌ನ ಜೆಟ್ಟಿ, ರಿವಿಟ್ ಮೆಂಟ್ ಕುಸಿದಿದೆ. ಮೂಲಸೌಕರ್ಯ ಕೇಳುವಂತೆಯೂ ಇಲ್ಲ. ಗಂಗೊಳ್ಳಿ ಕಿರುಬಂದರಿನಿಂದ ಪೂರ್ವಕ್ಕೆ ಒಂದು ಕಿ.ಮೀ. ಅಂತರದಲ್ಲಿ ಪಂಚಗಂಗಾವಳಿ ಸಂಗಮ ತಾಣದಲ್ಲಿರುವ ಈ ಪ್ರದೇಶ ಬಂದರಿನ ಅವ್ಯವಸ್ಥೆ ಕಾರಣಕ್ಕೆ ದೊಡ್ಡ ಬೋಟ್‌ಗಳು ಸಹಿತ ಎಲ್ಲ ಬಗೆಯ ದೋಣಿಗಳ ನಿಲುಗಡೆ ತಾಣವಾಗಿದೆ. 500ಕ್ಕೂ ಅಧಿಕ ಬೋಟ್‌ಗಳು ಇಲ್ಲಿ ವಿಶ್ರಾಂತಿ ಪಡೆಯುತ್ತವೆ. ನೀರಿನಲ್ಲೇ ಲಂಗರು ಹೂಡಿದರೆ ಸುಂಕ ನೀಡುವಂತಿಲ್ಲ, ವಾರ್ಪ್ ದಡದಲ್ಲಿ ನಿಲುಗಡೆ ಮಾಡಿದ್ದಲ್ಲಿ ಸುಂಕ ಪಾವತಿಸಬೇಕು.
ಗಂಗೊಳ್ಳಿ ಕಿರುಬಂದರಿನ ಅವ್ಯವಸ್ಥೆ ಕಾರಣಕ್ಕೆ ಬೋಟ್ ನಿಲುಗಡೆಗೆ ಇನ್ನೂ ಅನುಕೂಲಕರ ವಾತಾವರಣ ಮೂಡಿಬಂದಿಲ್ಲ. ಕಡಲಿನಲ್ಲಿ ಹಿಡಿದ ಮೀನು ದಡ ಸೇರಿಸುವಂತಹ ವ್ಯವಸ್ಥೆ ಮಾತ್ರ ಬಂದರಿನಲ್ಲಿ ರೂಪುಗೊಂಡಿದೆ. ಬೋಟ್ ನಿಲುಗಡೆಗೆ ಅವಕಾಶ ಇಲ್ಲದ ಕಾರಣಕ್ಕೆ ಬಂದರಿನ ಅಷ್ಟೂ ಬೋಟ್‌ಗಳು ಪ್ರಸ್ತುತ ಮ್ಯಾಂಗನೀಸ್ ವಾರ್ಪ್‌ನತ್ತ ಅನಿವಾರ್ಯ ಪಯಣ ಮಾಡಬೇಕು. ಬಹಳ ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. 4 ಎಕರೆ ವಿಸ್ತೀರ್ಣದ ಬಂದರು ಇಲಾಖೆಯ ಅಧೀನದಲ್ಲಿರುವ ಮ್ಯಾಂಗನೀಸ್ ವಾರ್ಪ್ ಇಲ್ಲಿನ ಮೀನುಗಾರರಿಗೆ ಸದ್ಯದ ಆಸರೆಯಾಗಿದೆ.
700ಕ್ಕೂ ಅಧಿಕ ಬೋಟ್‌ಗಳು ಗಂಗೊಳ್ಳಿ ಕಿರುಬಂದರಿನಲ್ಲಿ ಕಾರ್ಯಾಚರಿಸುತ್ತಿದ್ದರೂ ಸೂಕ್ತ ನೆಲೆಯಿಲ್ಲ. ಅನಿವಾರ್ಯವಾಗಿ ಎಲ್ಲ ಮೀನುಗಾರಿಕಾ ಬೋಟ್‌ಗಳು ಸನಿಹದ ಮ್ಯಾಂಗನೀಸ್ ವಾರ್ಪ್‌ನತ್ತ ಪಯಣ ಬೆಳೆಸಲೇಬೇಕಾಗಿದೆ. ಮ್ಯಾಂಗನೀಸ್ ವಾರ್ಪ್‌ನ್ನು ಮೀನುಗಾರಿಕೆ ಇಲಾಖೆ ಸುಪರ್ದಿಗೆ ನೀಡಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ.ರಾಮಪ್ಪ ಖಾರ್ವಿ ಗಂಗೊಳ್ಳಿ ಮೀನುಗಾರ ಮುಖಂಡ
ಬ್ರಿಟಿಷರ ಕಾಲದಿಂದಲೂ ವಹಿವಾಟು ಹೊಂದಿರುವ ಮ್ಯಾಂಗನೀಸ್ ವಾರ್ಪ್ ಸಮಗ್ರ ಅಭಿವೃದ್ಧಿ ಗಂಗೊಳ್ಳಿಯ ಪ್ರಗತಿಗೆ ಸಹಕಾರಿಯಾಗಲಿದೆ. ಈ ಬಗ್ಗೆ ಸಂಬಂಧಿತ ಇಲಾಖೆ ಗಮನಹರಿಸಬೇಕು.ಬಿ.ಸದಾನಂದ ಶೆಣೈ ಮಾಜಿ ಮಂಡಲ ಪ್ರಧಾನ, ಗಂಗೊಳ್ಳಿ