ಉಡುಪಿ: ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಚಾಂಪಿಯನಶಿಪ್ ಶನಿವಾರ ನಡೆಯಿತು.
ಪುರುಷರ ಓಟಕ್ಕೆ ಶಾಸಕ ಯಶ್ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಕಾಲೇಜ್ ಶಿಕ್ಷಣ ಇಲಾಖೆಯ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಚಾಲನೆ ನೀಡಿದರು. ಮಹಿಳೆಯರ ಓಟಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಚಾಲನೆ ನೀಡಿದರು.
ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಮಂಗಳೂರು ವಿವಿ ಕುಲಸಚಿವ ಸಂತೋಷ ಬಿ. ಜಗಲಸಾರ, ಕಾಲೇಜ್ ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕಿ ಡಾ. ಕವಿತಾ ಕೆ.ಆರ್., ಉದ್ಯಮಿ ಆನಂದ ಸುವರ್ಣ, ಪ್ರಖ್ಯಾತ್ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ನಾಗರಾಜ ಸಂಕೊಳ್ಳಿ, ಲಯನ್ಸ್ ಕ್ಲಬ್ ಅಮೃತ ಅಧ್ಯಕ್ಷೆ ಚಂದ್ರಿಕಾ ಜೆ.ಪಿ., ಉಡುಪಿ ಜಿಲ್ಲಾ ಆಥ್ಲೆಟಿಕ್ಸ್ ಅಸೋಸಿಯೇಷನ್ನ ಅಧ್ಯಕ್ಷ ಹರಿಪ್ರಸಾದ ರೈ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಎಐಯು ನವದೆಹಲಿಯ ವೀಕ್ಷಕ ಡಾ. ಜಯಪ್ರಕಾಶ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಕಾಲೇಜ್ನಲ್ಲಿ ಇಂತಹ ರಾಷ್ಟ್ರಮಟ್ಟದ ಪಂದ್ಯಾಟ ಅಚ್ಚುಕಟ್ಟಾಗಿ ಆಯೋಜಿಸಿರುವುದು ವಿಶೇಷ. ಯಾವುದೇ ಲೋಪದೋಷ, ತೊಡಕು ಇಲ್ಲದೆ ನಡೆದ ಕೆಲವೇ ಕೆಲವು ರಾಷ್ಟ್ರಮಟ್ಟದ ಪಂದ್ಯಾಕೂಟದಲ್ಲಿ ಇದೂ ಸೇರಿದೆ ಎಂದು ಶ್ಲಾಘಿಸಿದರು.
ಮಾಜಿ ಸಚಿವ ವಿನಯಕುಮಾರ ಸೊರಕೆ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ, ಪ್ರಸಾದ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ ಕೂಡ್ಲು, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಎಸ್. ಡಿಸೋಜಾ, ಕಾಲೇಜ್ನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವ್ಕರ, ಸಿಡಿಸಿ ಸದಸ್ಯ ಪ್ರವಿಣಕುಮಾರ್, ಧನಂಜಯ ಕುಂದರ್ ಉಪಸ್ಥಿತರಿದ್ದರು.
ಕಾಲೇಜ್ನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಅನುರಾಗ್ ನಿರೂಪಿಸಿದರು.
ಪುರುಷರ 10 ಕಿಮೀ ವಿಭಾಗದಲ್ಲಿ ಮುಂಬಯಿ ವಿವಿಯ ಸ್ವರಾಜ ಸಂದೀಪ ಜೋಷಿ ಪ್ರಥಮ, ಮಂಗಳೂರು ವಿವಿಯ ಶೈಲೇಶ ಕೆ. ದ್ವಿತೀಯ, ಹರ್ಯಾಣ ರೋಹ್ತಕ್ ಮಹರ್ಷಿ ದಯಾನಂದ ವಿವಿಯ ಅವಕಾಶ್ ತೃತೀಯ ಹಾಗೂ ಸಿಜಿಸಿ ಮೊಹಾಲಿ ವಿವಿಯ ದಿನೇಶ ಚತುರ್ಥ ಸ್ಥಾನ ಗಳಿಸಿದರು.
ಮಹಿಳೆಯರ 10 ಕಿಮೀ ವಿಭಾಗದಲ್ಲಿ ಕೇರಳ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿಯ ರಾಶಿ ಸಿ.ಎಂ. ಪ್ರಥಮ, ಜಿನ್ಸಿ ಜಿ. ದ್ವಿತೀಯ, ರಾಜಸ್ಥಾನ ಬಿಕಾನೇರ್ ಮಹಾರಾಜ ಗಂಗಾಸಿಂಗ್ ವಿವಿಯ ವಂದನಾ ಪಟೇಲ ತೃತೀಯ ಹಾಗೂ ಹರ್ಯಾಣ ರೋಹ್ತಕ್ ಮಹರ್ಷಿ ದಯಾನಂದ ವಿವಿಯ ಪೂಜಾ ಚತುರ್ಥ ಸ್ಥಾನ ಗಳಿಸಿದರು.
ಚಾಂಪಿಯನಶಿಪ್
ಪುರುಷರ ವಿಭಾಗದಲ್ಲಿ ರಾಜಸ್ಥಾನ ವಿವಿ ಜೈಪುರ ಪ್ರಥಮ, ಕ್ಯಾಲಿಕಟ್ ವಿವಿ ದ್ವಿತೀಯ ಹಾಗೂ ಮಂಗಳೂರು ವಿವಿ ತೃತೀಯ. ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ, ಹರ್ಯಾಣ ರೋಹ್ತಕ್ ಮಹರ್ಷಿ ದಯಾನಂದ ವಿವಿ ದ್ವಿತೀಯ ಹಾಗೂ ಕೇರಳ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿ ತೃತೀಯ.
ಮಂಗಳೂರು ವಿಶ್ವವಿದ್ಯಾನಿಲಯದ ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಗಳಿಸಿದವರಿಗೆ ಆಳ್ವಾಸ್ ಕಾಲೇಜಿನ ಡಾ. ಮೋಹನ ಆಳ್ವಾ ಅವರು ಕ್ರಮವಾಗಿ 10 ಸಾವಿರ ರೂ., 7,500 ರೂ., 5 ಸಾವಿರ ರೂ. ಹಾಗೂ 2,500 ರೂ. ನಗದು ಬಹುಮಾನ ನೀಡಿದರು. ಪಂದ್ಯಾಕೂಟದಲ್ಲಿ ಒಟ್ಟು 850 ಪುರುಷ ಕ್ರೀಡಾಪಟುಗಳು, 650 ಮಹಿಳಾ ಕ್ರೀಡಾಪಟುಗಳು ಹಾಗೂ 100 ಅಧಿಕಾರಿಗಳು ಭಾಗವಹಿಸಿದ್ದರು.
ತೆಂಕನಿಡಿಯೂರು ಕಾಲೇಜ್ ಮೈದಾನದಿಂದ ಆರಂಭವಾದ ಓಟ ಹಂಪನಕಟ್ಟೆ, ಕದಿಕೆ, ಆಸರೆ ಬೀಚ್, ಕೆಮ್ಮಣ್ಣು, ಹಂಪನಕಟ್ಟೆ ಮಾರ್ಗವಾಗಿ ಸಾಗಿ ಪುನ: ತೆಂಕನಿಡಿಯೂರು ಕಾಲೇಜ್ ಮೈದಾನದಲ್ಲಿ ಮುಕ್ತಾಯಗೊಂಡಿತು.