ಉಡುಪಿಯ ಪಿಪಿಸಿಯಲ್ಲಿ ಆಯೋಜಿಸಿದ್ದ ಮಂಗಳೂರು ವಿವಿ ಅಂತರ್ ಕಾಲೇಜ್ಗಳ ಚೆಸ್ ಕ್ರೀಡಾಕೂಟವನ್ನು ವಿಶ್ವಪ್ರಿಯ ಶ್ರೀ ಉದ್ಘಾಟಿಸಿದರು. ಯಶ್ಪಾಲ್ ಸುವರ್ಣ, ಪ್ರಶಾಂತ್ ಹೊಳ್ಳ, ರಾಮು ಎಲ್., ಸುರೇಶ್ ತುಂಗ, ಡಾ. ಚಂದ್ರಕಾಂತ್ ಭಟ್, ರಾಘವೇಂದ್ರ ಎಲ್., ಸೂರಜ್ ಎಂ. ಇದ್ದರು.
* ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರ ಅನಿಸಿಕೆ
* ಮಂಗಳೂರು ವಿವಿ ಅಂತರ್ ಕಾಲೇಜ್ ಕ್ರೀಡಾಕೂಟ ಉದ್ಘಾಟನೆ
ಉಡುಪಿ: 'ಪೇಟ್ ಕೇಲಿಯೇ ನೋಟ್, ನೋಟ್ ಕೇಲಿಯೇ ಸರ್ಕಾರೀ ಸೀಟ್, ಸೀಟ್ ಕೇಲಿಯೇ ನೀಟ್ ಚಾಹಿಯೇ' ಎಂಬ ಹೊಸ ಮಾತು ಚಾಲ್ತಿಯಲ್ಲಿದೆ. ಆದರೆ, ನೀಟ್ ವಿಚಾರದಲ್ಲಿ ಸರ್ಕಾರ ಎಡವಿದೆ. ಮಕ್ಕಳ ಭವಿಷ್ಯ ಹಾಳಾಗಿದ್ದು ಕಂಡು ನೋವಾಗಿದೆ. ದೆಹಲಿಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೊಳಿಸಿ ಝೆನ್-ಜಿ ನಡೆಸಿದ್ದ ಪ್ರತಿಭಟನೆಯ ರೀತಿ ಸರಿ ಇರಲಿಲ್ಲ. ಯಾವುದೇ ಹಾನಿ, ದೈಹಿಕ ನೋವಿಲ್ಲದೆ ಎದುರಾಳಿಯ ಸೋಲಿಸುವ ಚೆಸ್ ಆಟದಂತಿರಬೇಕು ಪ್ರತಿಭಟನೆಯ ಸ್ವರೂಪ. ಸೋತೆವೆಂದು ಚೆಸ್ ಕೈಬಿಡಬೇಡಿ. ಈ ಆಟದಲ್ಲಿ, ಓದಿನಲ್ಲಿ, ತಂದೆ-ತಾಯಿಯಲ್ಲಿ ಹಾಗೂ ದೇಶದ ಮೇಲೂ ಮನಸ್ಸಿಡಿ ಎಂದು ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಪೂರ್ಣಪ್ರಜ್ಞಾ ಕಾಲೇಜ್ನ ಸಭಾಂಗಣದಲ್ಲಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ನ ವತಿಯಿಂದ ಸಂಸ್ಥೆಯ ವಜ್ರ ಮಹೋತ್ಸವದ ಸಂದರ್ಭದಲ್ಲಿ ಶುಕ್ರವಾರ (ಸೆ.11) ಆಯೋಜಿಸಿದ್ದ 2 ದಿನಗಳ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜ್ಗಳ ಪುರುಷ&ಮಹಿಳಾ ವಿಭಾಗದ ಚೆಸ್ ಚಾಂಪಿಯನ್ಶಿಪ್ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಶಿಕ್ಷಣದೊಂದಿಗೆ ಕ್ರೀಡೆ, ಕಲೆ ಹಾಗೂ ಸಂಸ್ಕೃತಿಯಲ್ಲಿ ಮಕ್ಕಳನ್ನು ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ಪೂರ್ಣಪ್ರಜ್ಞ ಕಾಲೇಜ್ ಮಾದರಿಯಾಗಿದೆ. ನಾನಿಂದು ಶಾಸಕನಾಗಿ ನಿಮ್ಮ ಮುಂದೆ ನಿಂತು ಮಾತನಾಡುತ್ತಿರುವುದರ ಹಿಂದೆ ಸಂಧ್ಯಾ ಕಾಲೇಜ್ನ ಆಶೀರ್ವಾದವಿದೆ. ನಾನೂ ಸಹ ಇಲ್ಲಿಯೇ ಕಲಿತವನು. ಚೆಸ್ ಕ್ರೀಡೆ ಬುದ್ಧಿಮತ್ತೆಯ ಆಟವಾಗಿದ್ದು ರಾಜ್ಯ-ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಸಿಎ ಪ್ರಶಾಂತ್ ಹೊಳ್ಳ, ಪೂರ್ಣಪ್ರಜ್ಞ ಕಾಲೇಜ್ನ ಪ್ರಾಂಶುಪಾಲ ಪ್ರೊ.ರಾಮು ಎಲ್., ಪೂರ್ಣಪ್ರಜ್ಞ ಪಿಯು ಕಾಲೇಜ್ನ ಪ್ರಾಂಶುಪಾಲ ಸುರೇಶ್ ತುಂಗ, ಕ್ರೀಡಾಕೂಟದ ಪರಿವೀಕ್ಷಕ ವಿವೇಕಾನಂದ ಕಾಲೇಜ್ನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಕಾಲೇಜ್ನ ಐಕ್ಯೂಎಸಿ ಸಂಯೋಜಕ ರಾಘವೇಂದ್ರ ಎಲ್., ಸಂಧ್ಯಾ ಕಾಲೇಜ್ನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಎಂ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸಿಂಚನಾ, ನವ್ಯಾ ಹಾಗೂ ಪ್ರಾಂಜಲಿ ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ವಿನಾಯಕ್ ಪೈ ಬಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಎ ಅಂತಿಮ ವಿದ್ಯಾರ್ಥಿ ದೇವರಾಜ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಾಗರಾಜ್ ವಂದಿಸಿದರು.
'ಪೂರ್ಣ ಉತ್ಕರ್ಷ' ಗೌರವ
ರಾಷ್ಟ್ರ ಮಟ್ಟದಲ್ಲಿ ವಿವಿಧೆಡೆ ನಡೆದ ಚೆಸ್ ಟೂರ್ನಾಮೆಂಟ್ನಲ್ಲಿ ಸಾಧನೆ ಮಾಡಿದ ಕಾಲೇಜ್ನ ಹಳೆಯ ವಿದ್ಯಾರ್ಥಿಗಳಾದ ದೇವಿದಾಸ್ ಪೈ, ಸಾಕ್ಷತ್ ಕುಮಾರ್, ಪ್ರಜ್ವಲ್ ನಾಯಕ್, ವೃದ್ಧಿಕಾ ಶೆಟ್ಟಿ, ಮಹಿಮಾ, ಚಿತ್ಕಲಾಭಟ್, ರಜಿನಿ, ಆವನಿ ಆಚಾರ್ಯ ಅವರಿಗೆ ವಿಶ್ವಪ್ರಿಯ ತೀರ್ಥರು 'ಪೂರ್ಣ ಉತ್ಕರ್ಷ' ಪ್ರಶಸ್ತಿ ನೀಡಿ ಗೌರವಿಸಿದರು. ಕ್ರೀಡಾಕೂಟದಲ್ಲಿ 62 ಕಾಲೇಜ್ಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೊಬೈಲ್ ಗೀಳಿನಿಂದ ಹೊರಬಂದು ಏಕಾಗ್ರತೆ ಸಾಧಿಸಲು ಚೆಸ್ ಸಹಕಾರಿ. ಚೆಸ್ನ ಕಾಯಿ ಹಿಡಿದರೆ ಮುಂದಡಿ ಇಡುತ್ತೇವೆಯೇ ಹೊರತು ಹಿಂದಡಿಯ ಮಾತೇ ಇಲ್ಲ. ಇದು ಪೂರ್ಣತ್ವದ ಕ್ರೀಡೆಯಾಗಿದ್ದು, ಜೀವನದಲ್ಲೂ ಸಮತೋಲನ ಸಾಧಿಸಲು ಪ್ರೇರಣೆ ನೀಡುತ್ತದೆ.