ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬಿ.ಕೆ. ಹರಿಪ್ರಸಾದ್ ಅವರಿಗೆ ಮನವಿ ನೀಡಲಾಯಿತು. ಸಂತೋಷ್ ಡಿಸೋಜಾ, ಸ್ಟೀವನ್ ರೊಡ್ರಿಗಸ್, ಸ್ಟ್ಯಾನಿ ಲೋಬೊ, ಮೆಲ್ವಿನ್ ಆರಾನ್ಹಾ ಶಿರ್ವ, ವಾಲ್ಟರ್ ಸಿರಿಲ್ ಪಿಂಟೊ, ವಲೇರಿಯನ್ ಫೆರ್ನಾಂಡಿಸ್ ಇದ್ದರು.
* ಕಥೊಲಿಕ್ ಸಭಾದಿಂದ ಬಿ.ಕೆ. ಹರಿಪ್ರಸಾದ್ಗೆ ಮನವಿ
ಉಡುಪಿ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಕಥೊಲಿಕ್ ಸಭಾ ಮಂಗಳೂರು, ಹಾಗೂ ಉಡುಪಿ ಪ್ರದೇಶ ನಿಯೋಗದ ವತಿಯಿಂದ ಮಂಗಳೂರಿನಲ್ಲಿ ಮಂಗಳವಾರ (ಜೂ.23) ಮನವಿ ಸಲ್ಲಿಸಲಾಯಿತು.
ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸಂತೋಷ್ ಡಿಸೋಜಾ ಮಾತನಾಡಿ, ಕರಾವಳಿಯಲ್ಲಿ ಕ್ರೈಸ್ತ ಸಮುದಾಯ ಪ್ರತಿನಿಧಿಸುತ್ತಿರುವ ಐವನ್ ಡಿಸೋಜಾ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮುಖ್ಯ ಸಚೇತಕಾರಾಗಿ ಹಾಗೂ ಕ್ರೈಸ್ತ ಅಭಿವೃವೃದ್ಧಿ ನಿಗಮದಲ್ಲೂ ವಿವಿಧ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ನ ಗೆಲುವಿಗೆ ರಾಜ್ಯದ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದರು.
ಸಮುದಾಯಕ್ಕೆ ಸಂಪುಟದಲ್ಲಿ ಉನ್ನತ ಸ್ಥಾನ ನೀಡುವಾಗ ಪ್ರತಿಬಾರಿ ಅವಕಾಶ ವಂಚಿರಾಗುತ್ತಿದ್ದಾರೆ. ಈ ಬಾರಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಎಲ್ಲ ಸಮುದಾಯಕ್ಕೆ ಸಮಾನ ಅವಕಾಶ ನೀಡಬೇಕು. ತನ್ಮೂಲಕ ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ಅಥವಾ ವಿಧಾನ ಪರಿಷತ್ ಸಭಾಪತಿಯಾಗಿ ನೇಮೀಸಬೇಕು. ಅವರಿಗೆ ಸಚಿವ ಸ್ಥಾನ ನೀಡಿದರೆ ಮುಂದಿನ ದಿನಗಳಲ್ಲಿ ಪಕ್ಷದ ಏಳಿಗೆಗೂ ಮತ್ತಷ್ಟು ಸಹಕಾರಿಯಾಗಲಿದೆ. ಕಾಂಗ್ರೆಸ್ನ ರಾಜ್ಯಾಧ್ಯಕ್ಷರಾಗಿ ಕ್ರೈಸ್ತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನಿಯೋಗದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಶಿರ್ವ, ಮಾಜಿ ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ, ವಲೇರಿಯನ್ ಫೆರ್ನಾಂಡಿಸ್ ಇತರರು ಉಪಸ್ಥಿತರಿದ್ದರು.