ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜ್ಗಳ ಚೆಸ್ ಪಂದ್ಯಾಟದ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಕುಂದಾಪುರದ ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಟಿ.ಪ್ರಶಾಂತ್ ಹೊಳ್ಳ, ವಿಶಾಖ್ ಶೆಟ್ಟಿ, ರವಿಶಂಕರ್, ಪ್ರಸನ್ನ ರಾವ್ ಬಿ., ಡಾ. ಚಂದ್ರಕಾಂತ ಭಟ್, ಡಾ. ರಾಘವೇಂದ್ರ ಎಲ್., ಸೂರಜ್ ಮರವಂತೆ ಇದ್ದರು.
* ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ್ ಹೊಳ್ಳ ಅಭಿಪ್ರಾಯ
* ಪಿಪಿಸಿಯಲ್ಲಿ ಚೆಸ್ ಪಂದ್ಯಾಟದ ಸಮಾರೋಪ
ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಬಹುಮಾನ ಪಡೆಯುವುದಕ್ಕಿಂತಲೂ ಸ್ಪರ್ಧೆಯಿಂದ ಪಡೆಯುವ ಅನುಭವಗಳೆ ಜೀವನದ ಅವಿಸ್ಮರಣೀಯ ಕ್ಷಣಗಳಾಗಿರುತ್ತವೆ. ಅದರಲ್ಲೂ ಚೆಸ್ನಂಥಹ ಕ್ರೀಡೆಯು ಮನಸ್ಸನ್ನು ಸದಾ ಜಾಗೃತವಾಗಿಸುತ್ತದೆ. ಸೋಲು-ಗೆಲುವಿಗಿಂತ ಹೆಚ್ಚಾಗಿ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಸಾಧನೆಯ ದಾರಿಯಾಗಿರುತ್ತದೆ ಎಂದು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ್ ಹೊಳ್ಳ ಅಭಿಪ್ರಾಯಪಟ್ಟರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಶುಕ್ರವಾರ (ಸೆ.11)ದಿಂದ ಆರಂಭಗೊಂಡಿದ್ದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜ್ಗಳ 2ದಿನದ ಚೆಸ್ ಪಂದ್ಯಾಟದ ಸಮಾರೋಪದ ನಿಮಿತ್ತ ಶನಿವಾರ (ಸೆ.12) ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಜೀವನದಲ್ಲೂ ಯಶಸ್ಸು
ಕಾಲೇಜ್ನ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ವಿಶಾಖ್ ಶೆಟ್ಟಿ ಮಾತನಾಡಿ, ಚೆಸ್ ಪಂದ್ಯಾಟದಲ್ಲಿ ಆಲೋಚಿಸಿ ಇಡುವ ಪ್ರತಿ ಹೆಜ್ಜೆಯೂ ನಿರ್ಣಾಯಕವಾಗಿರುತ್ತದೆ. ಹಾಗೆಯೇ ಬದುಕಿನಲ್ಲಿಯೂ ಸಹ ಇದೇ ಬಗೆಯ ಶ್ರದ್ಧೆ, ಏಕಾಗ್ರತೆ ಹಾಗೂ ಬದ್ಧತೆಯಿಂದ ಆಲೋಚಿಸಿ ಹೆಜ್ಜೆ ಇಟ್ಟಲ್ಲಿ ಯಶಸ್ಸು ಖಂಡಿತ ಎಂದರು.
ವಿಶ್ವ ವಿದ್ಯಾನಿಲಯದ ಪ್ರತಿನಿಧಿಗಳಾದ ರವಿಶಂಕರ್, ಪ್ರಸನ್ನ ರಾವ್ ಬಿ. ಮಾತನಾಡಿ, ಉತ್ತಮವಾಗಿ ಪಂದ್ಯಾಟ ಆಯೋಜಿಸಿರುವುದಕ್ಕೆ ಅಭಿನಂದಿಸಿದರು. ಕಾಲೇಜ್ನ ಪ್ರಾಂಶುಪಾಲ ಡಾ. ಚಂದ್ರಕಾಂತ ಭಟ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ಪ್ರಾಂಜಲಿ ಪ್ರಾರ್ಥಿಸಿದರು. ಕಾಲೇಜ್ನ ಐಕ್ಯೂಎಸಿ ಘಟಕದ ಸಂಯೋಜಕ ಡಾ. ರಾಘವೇಂದ್ರ ಎಲ್. ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಮರವಂತೆ ವಂದಿಸಿದರು. ನವ್ಯಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು, ಕುಂದಾಪುರಕ್ಕೆ ಪ್ರಥಮ ಸ್ಥಾನ
ಮಹಿಳಾ ವಿಭಾಗದಲ್ಲಿ ಮಂಗಳೂರಿನ ದಯಾನಂದ ಪೈ ಪಿ.ಸತೀಶ್ ಪೈ ಸ.ಪ್ರ.ದ ಕಾಲೇಜ್ ಪ್ರಥಮ ಸ್ಥಾನ, ವಿವೇಕಾನಂದ ಕಾಲೇಜ್ (ಸ್ವಾಯತ್ತ) ಪುತ್ತೂರು ದ್ವಿತೀಯ, ಎಸ್ಡಿಎಂ ಕಾಲೇಜ್ (ಸ್ವಾಯತ್ತ) ಉಜಿರೆ ತೃತೀಯ ಹಾಗೂ ಡಾ. ಬಿ.ಬಿ. ಹೆಗ್ಡೆ ಪ್ರ.ದ.ಕಾಲೇಜ್ ಕುಂದಾಪುರ ಚತುರ್ಥ ಸ್ಥಾನ ಗಳಿಸಿತು. ಪುರುಷರ ವಿಭಾಗದಲ್ಲಿ ಕುಂದಾಪುರದ ಡಾ. ಬಿ.ಬಿ.ಹೆಗ್ಡೆ ಪ್ರ.ದ. ಕಾಲೇಜ್ ಪ್ರಥಮ ಸ್ಥಾನ, ವಿವೇಕಾನಂದ ಕಾಲೇಜ್ (ಸ್ವಾಯತ್ತ)ಪುತ್ತೂರು ದ್ವಿತೀಯ, ಭಂಡಾರ್ಕಾರ್ಸ್ ಕಾಲೇಜ್ ಕುಂದಾಪುರ ತೃತೀಯ ಹಾಗೂ ಶ್ರೀ ಪೂರ್ಣಪ್ರಜ್ಞ ಕಾಲೇಜ್ ಉಡುಪಿ ಚತುರ್ಥ ಸ್ಥಾನ ಗಳಿಸಿತು. ಪಂದ್ಯಾಟದಲ್ಲಿ 67 ಕಾಲೇಜ್ಗಳ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.