ವೇದಿಕೆ ಅಧ್ಯಕ್ಷ ನಟರಾಜ್ ಪರ್ಕಳ ಸುದ್ದಿಗೋಷ್ಠಿ.
ಉಡುಪಿ: ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆಯ 23ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕಲಾ ಕೌಸ್ತುಭ ಸಾಂಸತಿಕ ಕಾರ್ಯಕ್ರಮ ಮೇ 17ರಂದು ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಜರುಗಲಿದೆ ಎಂದು ವೇದಿಕೆ ಅಧ್ಯಕ್ಷ ನಟರಾಜ್ ಪರ್ಕಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 10ಕ್ಕೆ ಸ್ಥಳಿಯ ಸಂಘ-ಸಂಸ್ಥೆಗಳ ಸಮನ್ವಯ ಸಭೆ ಏರ್ಪಡಿಸಲಾಗಿದ್ದು, ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಉದ್ಘಾಟಿಸಲಿರುವರು. ಅಂಬಾಭವನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಕಬ್ಯಾಡಿ ಅಧ್ಯಕ್ಷತೆ ವಹಿಸಲಿದ್ದು, ದೇವಾಲಯಗಳ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಸಪ್ನ ಸುರೇಶ್, ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್, ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಹೆಬ್ಬಾರ್ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3.30ಕ್ಕೆ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಸಾಂಸತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ತದನಂತರ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಅವರಿಂದ ಯಕ್ಷಗಾನ ವೈಭವ ಹಾಡುಗಾರಿಕೆ ನಡೆಯಲಿದೆ. ಸಂಜೆ 4.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕಿ ಡಾ. ಮಾಲತಿ ಆರ್. ಭಟ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಮಣ್ಯ ಜಿ. ಭಟ್ ಕುರ್ಯ, ಶಿಕ್ಷಕಿ ವಂದನಾ ರೈ ಕಾರ್ಕಳ, ಡಿಜಿಟಲ್ ಕ್ರಿಯೇಟರ್ ಸಂಧ್ಯಾ ಕಾಮತ್ ಹಾಗೂ ಮಹೇಶ್ ಠಾಕೂರ್ ಪರ್ಕಳ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭದಲ್ಲಿ ಗಣಪತಿ ವಿಗ್ರಹ ತಯಾರಕ ದೇವರಾಜ್ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಛಾಯಾಗ್ರಾಹಕ ನಿಧೀಶ್ ಕುಮಾರ್ ಪರ್ಕಳ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕ ಗೋಪಿ ಹಿರೇಬೆಟ್ಟು, ಪ್ರಮುಖರಾದ ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು, ಗಣೇಶ್ ಸಣ್ಣಕ್ಕಿಬೆಟ್ಟು, ಸಂದೀಪ್ ನಾಯ್ಕ ಕಬ್ಯಾಡಿ, ಗಜೇಂದ್ರ ಆಚಾರ್ಯ ಉಪಸ್ಥಿತರಿದ್ದರು.