ಉಡುಪಿಯ ಪರ್ಕಳದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯ ಕಲಾ ಕೌಸ್ತುಭ ಕಾರ್ಯಕ್ರಮವನ್ನು ಗಣೇಶ್ ಆಚಾರ್ಯ ಬಿಲ್ಲಾಡಿ ಉದ್ಘಾಟಿಸಿದರು. ನಟರಾಜ್ ಪರ್ಕಳ, ಮಂಜುನಾಥ್ ಉಪಾಧ್ಯ, ಅಶೋಕ್ ಸಣ್ಣಕ್ಕಿಬೆಟ್ಟು ಶ್ರೀನಿವಾಸ್ ನಾಯಕ್ ಚಕ್ರತಿರ್ಥ ಇತರರಿದ್ದರು.
* ಪಾಲಕರಿಗೆ ಶಿಕ್ಷಕಿ ವಂದನಾ ರೈ ಸಲಹೆ
* 'ಕಲಾ ಕೌಸ್ತುಭ' ಸಾಹಿತ್ಯ-ಸಾಂಸ್ಕೃತಿಕ ಹಬ್ಬ
ಉಡುಪಿ: ಹಿಂದಿನ ಮಕ್ಕಳು ಬೆಳೆದ ರೀತಿಗೂ, ಇಂದಿನ ಮಕ್ಕಳು ಬೆಳೆಯುತ್ತಿರುವ ರೀತಿಗೂ ಅಜಗಜಾಂತರವಿದೆ. ಇಂದಿನ ಬಹುತೇಕ ಮಕ್ಕಳಿಗೆ ಸಂಸ್ಕಾರದ ಅರಿವೂ ಇಲ್ಲ. ಬಾಲ್ಯದಲ್ಲಿಯೇ ಅವರಿಗೆ ಸಂಸ್ಕಾರ, ದುಡ್ಡಿನ ಮೌಲ್ಯ ತಿಳಿಸಿಕೊಡಬೇಕು. ಅಗತ್ಯ ಇದ್ದರೆ ಮಾತ್ರ ಅವರಿಗೆ ಮೊಬೈಲ್ ಕೊಡಬೇಕು. ಪಾಲಕರೂ ಸಹ ಮಕ್ಕಳ ಜತೆ ಮಕ್ಕಳಂತೆಯೇ ಬೆರೆಯಬೇಕು ಎಂದು ಅಂತಾರಾಷ್ಟ್ರೀಯ ಮಯೂರ ವಿದ್ಯಾರತ್ನ ಪ್ರಶಸ್ತಿ ಪುರಸತ ಶಿಕ್ಷಕಿ ವಂದನಾ ರೈ ಕಾರ್ಕಳ ಸಲಹೆ ನೀಡಿದರು.
ಉಡುಪಿ ತಾಲೂಕಿನ ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಆಯೋಜಿಸಿದ್ದ 23ನೇ ವರ್ಷದ 'ಕಲಾ ಕೌಸ್ತುಭ' ಸಾಹಿತ್ಯ-ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರ್ಕಳದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯ ಕಲಾ ಕೌಸ್ತುಭ ಕಾರ್ಯಕ್ರಮದಲ್ಲಿ ವಂದನಾ ರೈ ಮಾತನಾಡಿದರು. ಡಿಜಿಟಲ್ ಕ್ರಿಯೇಟರ್ ಮತ್ತು ಮಣಿಪಾಲ ಮಾಧವ ಕೃಪಾ ಶಾಲೆಯ ಶಿಕ್ಷಕಿ ಸಂಧ್ಯಾ ಕಾಮತ್ ಮಾತನಾಡಿ, ಹೆಚ್ಚು ಅಂಕ ಗಳಿಸುವಂತೆ ಬಹುತೇಕ ಪಾಲಕರು ಒತ್ತಡ ಹಾಕುತ್ತಾರೆ. ಅದಕ್ಕಿಂತ ಮುಖ್ಯವಾಗಿ ಕೌಶಲ, ಬದುಕುವ ಕಲೆಯನ್ನು ಮಕ್ಕಳಿಗೆ ಕಲಿಸಬೇಕು. ಮನೆ, ಸಮಾಜದಲ್ಲಿ ಮಕ್ಕಳ ಪ್ರತಿಭೆಗೆ ನೀಡುವ ಪ್ರೋತ್ಸಾಹ ಶಾಲೆಯಲ್ಲಿ ಪ್ರತಿಫಲಿಸುತ್ತದೆ ಎಂದರು.
ಮಂಗಳೂರು ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕಿ ಡಾ. ಮಾಲತಿ ಆರ್. ಭಟ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಭಟ್ ಮಾತನಾಡಿದರು.
ಸನ್ಮಾನ
ಸೃಜನಶೀಲ ಛಾಯಾಗ್ರಾಹಕ ನಿಧೀಶ್ ಪರ್ಕಳ ಹಾಗೂ ಗಣಪತಿ ವಿಗ್ರಹ ತಯಾರಕ ದೇವರಾಜ್ ನಾಯಕ್ ಸಣ್ಣಕ್ಕಿಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಪೋಷಕ ಭುವನಪ್ರಸಾದ್ ಹೆಗ್ಡೆ ಮಣಿಪಾಲ ಉಪಸ್ಥಿತರಿದ್ದರು.
ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯ ಸಂಚಾಲಕ ಮಂಜುನಾಥ್ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಅಧ್ಯಕ್ಷ ನಟರಾಜ್ ಪರ್ಕಳ ಸ್ವಾಗತಿಸಿದರು. ಅಶೋಕ್ ಸಣ್ಣಕ್ಕಿ ಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ್ ನಾಯಕ್ ಚಕ್ರತಿರ್ಥ ವಂದಿಸಿದರು.
ನೃತ್ಯರೂಪಕ, ನಾಟಕ ಪ್ರದರ್ಶನ
ಕಲಾ ಕೌಸ್ತುಭದ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೀಕ್ಷಾ ಗುಂಡುಪಾದೆ ನಿರ್ದೇಶನದಲ್ಲಿ ಮರ್ಣೆಯ ಶ್ರೀ ಮಹಾಲಿಂಗೇಶ್ವರ ನಾಟ್ಯ ತಂಡದ ಕಲಾವಿದರು 'ಧರೆಗಿಳಿದ ಜಗನ್ಮಾತೆ' ನೃತ್ಯರೂಪಕ ಪ್ರದರ್ಶಿಸಿದರು. ಕಾರ್ಕಳದ ಡೆನ್ನಾನ ಕಲಾವಿದರಿಂದ 'ಡೆನ್ನಾನ' ನಾಟಕ ಪ್ರದರ್ಶನಗೊಂಡಿತು.