ಉಡುಪಿಯ ಸರಸ್ವತಿ ತ್ರಿವಿಕ್ರಮ ಭಟ್ ಮನೆಯಲ್ಲಿ ಡಾ. ರಾಘವೇಂದ್ರ ರಾವ್ ಮತ್ತು ಮಂಜುಳಾ ಎಸ್. ಭಟ್ ಮಂಚಿ ಅವರು ಗಮಕ ವಾಚನ ನಡೆಸಿದರು.
* ಪರಿಷತ್ನ ಅಧ್ಯಕ್ಷ ಸತೀಶಕುಮಾರ್ ಕೆಮ್ಮಣ್ಣು ಮಾಹಿತಿ
* ಅಭಿಯಾನದ 20ನೇ ಕಾರ್ಯಕ್ರಮ
ಉಡುಪಿ: ಮನೆಮನೆ ಗಮಕ ಅಭಿಯಾನವೆಂದರೆ ಸಿರಿವಂತ ಕನ್ನಡದ ಮಹಾಕಾವ್ಯಗಳ ಆರಾಧನೆಯಾಗಿದೆ. ಮನೆಮನೆಯಲ್ಲಿ ಇಂತಹ ಕಾವ್ಯ ವಾಚನ, ವ್ಯಾಖ್ಯಾನದ ಪರ್ವ ಏರ್ಪಡಿಸಿ ಕನ್ನಡ ಕಾವ್ಯಗಳ ಮಹತ್ವ ಮತ್ತು ಸಾಹಿತ್ಯದ ವಿಶೇಷತೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ನ ಅಧ್ಯಕ್ಷ ಸತೀಶಕುಮಾರ್ ಕೆಮ್ಮಣ್ಣು ತಿಳಿಸಿದರು.
ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ನ ವತಿಯಿಂದ ಉಡುಪಿಯ ಸರಸ್ವತಿ ತ್ರಿವಿಕ್ರಮ ಭಟ್ ಅವರ ಮನೆಯಲ್ಲಿ ಆಯೋಜಿಸಿದ್ದ 'ಮನೆಮನೆ ಗಮಕ' ಅಭಿಯಾನದ 20ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಮಕ ಪದವಿ ಗಳಿಸಿದ ವಿದ್ಯಾರ್ಥಿಗಳಿಂದ 'ನಳಹಂಸ ಮೈತ್ರಿ' ಗಮಕ ವಾಚನ ಕಥಾ ನಿರೂಪಣೆ ನಡೆಯಿತು. ತದನಂತರ ರಾಘವಾಂಕನ ಹರಿಶ್ಚಂದ್ರ ಕಾವ್ಯದ ವಿಶ್ವೇಶ್ವರ ಸಾಕ್ಷಾತ್ಕಾರ ಕಥಾಭಾಗದ ಗಮಕ ವಾಚನ ವ್ಯಾಖ್ಯಾನವನ್ನು ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ ಮತ್ತು ಡಾ. ರಾಘವೇಂದ್ರ ರಾವ್ ನಡೆಸಿಕೊಟ್ಟರು.
ತ್ರಿವಿಕ್ರಮ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಪರಿಷತ್ನ ತಾಲೂಕು ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಅಭಿರಾಮ ಧಾಮದ ಡಾ. ಸುದರ್ಶನ ಪರ್ಲತ್ತಾಯ, ಸರಸ್ವತಿ ತ್ರಿವಿಕ್ರಮ ಭಟ್, ಕನ್ನಡ ಕಾವ್ಯಾಭಿಮಾನಿಗಳು, ಗಮಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಕಾಂಬಿಕಾ ಪ್ರಾರ್ಥಿಸಿದರು. ಸುಷ್ಮಾ ಸುದರ್ಶನ ಸ್ವಾಗತಿಸಿದರು. ಡಾ. ಸುದರ್ಶನ ಪರ್ಲತ್ತಾಯ ಕಾರ್ಯಕ್ರಮ ನಿರೂಪಿಸಿದರು.