ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಶಿಕ್ಷಕ ಶ್ರೀನಿವಾಸ ದೇವಾಡಿಗ ಅವರು ಮಂದರತಿ ಪ್ರಾಚ್ಯ ವಸ್ತು ಪ್ರದರ್ಶನ ಅಯೋಜಿಸಿಸಿರುವುದು. 
ಉಡುಪಿ

ಗ್ರಾಮೀಣರ 'ಜೀವನಾಡಿ' ದರ್ಶನ

* ಶಿಕ್ಷಕನಿಂದ ಹಳೆಯ ಪರಿಕರಗಳ ಪ್ರದರ್ಶನ

* ಹಳ್ಳಿಗರ ಬದುಕಿನ ಜ್ಞಾನ ಅನಾವರಣ

ಪ್ರಶಾಂತ ಭಾಗ್ವತ ಉಡುಪಿ
ಶಾಲೆಯ ತರಗತಿಯೊಳಗೆ ವಿದ್ಯಾರ್ಥಿಗಳಿಗೆ ಪಠ್ಯಜ್ಞಾನ ನೀಡುವ ಶಿಕ್ಷಕರೊಬ್ಬರು ಗ್ರಾಮೀಣ ಜನರ ಹಿಂದಿನ ಜೀವನ ಶೈಲಿ, ಬಳಸುತ್ತಿದ್ದ ವಿವಿಧ ಹಳೆಯ ಪರಿಕರಗಳ ಮೂಲಕ ಜನರಿಗೆ ಪಾಠ ಮಾಡುತ್ತಿದ್ದಾರೆ.
ಕುಂದಾಪುರ ತಾಲೂಕಿನ ಬಿದ್ಕಲ್​ಕಟ್ಟೆ ಗ್ರಾಮದ ಕರ್ನಾಟಕ ಪಬ್ಲಿಕ್​ ಸ್ಕೂಲ್​ನ ಶಿಕ್ಷಕ ಶ್ರೀನಿವಾಸ ದೇವಾಡಿಗ ಎಂಬವರು 350ಕ್ಕೂ ಅಧಿಕ ಹಳೆಯ ಪರಿಕರ ಸಂಗ್ರಹಿಸಿದ್ದು, ರಜಾ ದಿನಗಳಲ್ಲಿ 'ಮಂದರತಿ ಪ್ರಾಚ್ಯ ವಸ್ತು ಪ್ರದರ್ಶನ'ದ ಮೂಲಕ ಅರಿವು ಮೂಡಿಸುತ್ತಿದ್ದಾರೆ.
ರಕ್ಷಣೆಯ ಕಾರ್ಯ
ತಂತ್ರಜ್ಞಾನದ ಅಬ್ಬರ ಅಪ್ಪಳಿಸುವ ಮೊದಲು ಜನರು ಯಾವೆಲ್ಲ ಪರಿಕರ ಬಳಸಿ ಜೀವನ, ಕೃಷಿ ಕಾರ್ಯ ಮಾಡುತ್ತಿದ್ದರು ಎನ್ನುವ ಬಗ್ಗೆ ಶಿಕ್ಷಕ ಶ್ರೀನಿವಾಸ ತಿಳಿಸಿಕೊಡುತ್ತಾರೆ. ಗ್ರಾಮೀಣರ ಬದುಕು ಹೇಗಿತ್ತೆಂಬ ಚಿತ್ರಣ ಸ್ಮೃತಿ ಪಟಲದಲ್ಲಿ ಗೋಚರಿಸುವಂತೆ ವಿವರಿಸುತ್ತಾರೆ. 13 ವರ್ಷದಿಂದ ಗ್ರಾಮೀಣ ಸೊಗಡಿನ ಪರಿಕರ ಸಂಗ್ರಹಿಸುತ್ತಿದ್ದು, ಅವುಗಳ ರಕ್ಷಣೆಯನ್ನೂ ಮಾಡುತ್ತಿದ್ದಾರೆ.

34 ಪ್ರದರ್ಶನ

ಸಂಗ್ರಹಿಸಿರುವ ಹಳೆಯ ವಸ್ತುಗಳ ನಿರ್ವಹಣೆ ಸವಾಲಿನದಾಗಿದೆ. ಒಂದು ಲಾರಿಯಷ್ಟು ಪರಿಕರ ಇದ್ದು, ಪ್ರದರ್ಶನ ಇರುವ ಕಡೆಗಳಲ್ಲಿ ಸಾಗಾಟ ಮಾಡಬೇಕಿದೆ. ಜಿಲ್ಲೆ ಹಾಗೂ ಅನ್ಯ ಜಿಲ್ಲೆಗಳಲ್ಲಿ ಪ್ರಮುಖ ಕಾರ್ಯಕ್ರಮ ಇದ್ದರೆ ಅಲ್ಲಿನ ಆಯೋಜಕರು ಪ್ರದರ್ಶನ ಏರ್ಪಡಿಸುವಂತೆ ಆಹ್ವಾನ ನೀಡುತ್ತಾರೆ. ಈವರೆಗೆ 34 ಪ್ರದರ್ಶನ ನಡೆದಿದ್ದು, ಜನರಿಂದಲೂ ಉತ್ತಮ ಸ್ಪಂದನೆ ಲಭಿಸುತ್ತಿದೆ. ಬೆಳಗ್ಗೆ ನಿದ್ದೆಯಿಂದ ಎದ್ದಾಗಿನಿಂದ ರಾತ್ರಿ ಮಲಗುವ ತನಕದ ಪರಿಕರಗಳ ಬಳಕೆ ಹೇಗಿತ್ತೆಂದು ಜನರು ತಿಳಿದುಕೊಳ್ಳಬೇಕು ಎನ್ನುವುದೇ ಈ ಪ್ರದರ್ಶನದ ಉದ್ದೇಶ ಎನ್ನುತ್ತಾರೆ ಶಿಕ್ಷಕ ಶ್ರೀನಿವಾಸ ದೇವಾಡಿಗ.
ನೂರಾರು ವಸ್ತುಗಳ ವೈವಿಧ್ಯ
ಪ್ರದರ್ಶನದಲ್ಲಿ ಹಳೆಯ ಕಾಲದ ಫೋಟೋ ಸ್ಟ್ಯಾಂಡ್​, ಮಣ್ಣಿನಿಂದ ತಯಾರಿಸಿದ ಬೃಹತ್​ ಹಣತೆ, ನೀರಿನ ಕೊಡ, ಕಸಿನ ಮಳ್ಗಿ, ಸುಣ್ಣದ ಕೊಡ, ಪದಾರ್ಥದ ಅಳಗೆ, ಅಗುಷ್ಠಿ, ಮಿಂಚುಬಂಧಕ ಫೋನ್​, ರಿಂಗ್​ ಫೋನ್​, ಕ್ವಾರ್ಡ್​ಲೆಸ್​ ಫೋನ್​, ಹೂಂಟೆ ಕೋಲು, ಹೆಡ್ಗೆ ಕೈ, ಪಿಟ್ಲಿ, ಚಿನ್ನಿದಾಂಡು, ಸ್ವಾಂಟಿ, ಹಕ್ಕಿ ಬಾಲ, ಕೋಲಾಟದ ಕೋಲು, ನಾರು ಹಗ್ಗ, ಕಡ್ಡಿ ಚಾಪೆ, ಕಂಬಳಿ ಕಡ್ಡಿ, ಹುರಿ ಹಗ್ಗದ ಮ್ಯಾಟ್​, ಗೆರ್ಸಿ, ಪಾತ್ರೆಸಿಕ್ಕ, ಶೆಬೆ, ಕತ್ತದ ಬ್ರಷ್​, ಮಣ್ಣು ಎಳೆಯುವ ಕೊಕ್ಕೆ, ವ್ಯಾಸಪೀಠ, ಮರದ ಕಳ್ಳೆ, ಅಚ್ಚೇರು, ಸೇರು, ಕೊಳಗ, ಕಳಸಿಗೆ ಕೋಲು, ರೇಡಿಯೋ, ಒರಗಲ್ಲು, ಲಾಟನ್ನು, ಕೂರಿಗೆ, ದುಡ್ಡಿನ ಪೆಟ್ಟಿಗೆ, ಸೊಂಟದ ಸುಣ್ಣದ ಅಂಡೆ, ಪಡಗ, ಬಿದಿರಿನ ಸಿಬ್ಬಲು, ಬೆಣಗಲ್ಲು ಪುಡಿ, ತಕ್ಕಡಿ, ಕಣಸೆ, ಗರಗಸ, ಮರದ ಪರ್ಟಿನ ಬ್ಯಾಟ್​, ಕೊಂತಳ್ಕಿ ಸೂಡಿ, ಚಾಪರ್ಕಿ ಸೂಡಿ, ಕೆದ್ಲು, ಮುಳಿ ಹುಲ್ಲಿನ ಪೊರಕೆ, ಅಡಕೆ ಪೊರಕೆ, ತೆಂಗಿನ ಪೊರಕೆ, ಹಾಳೆಯ ಕಡ್ಡಿ, ಅಡಕೆ ಹಾಳೆಯ ಚಪ್ಪಲಿ, ಬೀಡಿಸೂಪ್​, ಕುಕ್ಕೆ, ಮೀನಿನ ಸಿಕ್ಕ, ಕರಟದ ಗಾಡಿ, ಜೊತಕ, ತಳಕಿ ಬಳ್ಳಿ, ಲಗೋರಿ ಕಲ್ಲು, ಬಾಯಿ ಕತ್ತಿ, ಕತ್ತಿ ಅಣಸು, ಕೈಚೀಲ, ದೀಪದ ಕಾಲು, ಚಿಮಣಿ, ಕಬ್ಬಿಣದ ರಾಟೆ, ಪಟ್ಟೆ ನೂಲು, ಮುಡಿಸಾಹಿತ್ಯ, ಕರಟದ ಚಿಪ್ಪು, ವಿಭೂತಿ ಕರಡಿಕೆ, ಚೆನ್ನೆಮಣೆ, ಕಡಗೋಲು, ಕೈಬಟ್ಟಲು, ಸಾಂಬಾರು ಬಟ್ಟಲು, ಉಪ್ಪಿನಕಾಯಿ ಚಟ್ಟಿ, ದಾಲ್​ಕಿನ್ನಿ ಕೊರಡು, ಅಕ್ಕಚ್ಚಿನ ಕೊರಡು, ಕಡಗಲ್ಲು ಮಗು, ಮೀನುಗೂಳಿ, ಏಡಿಗೂಳಿ, ಗೊರ್ಬು, ನೊಗ, ಮೀನು ಗಾಳ, ಓಲಿ ಕೊಡೆ, ಕೃಷಿ ಪರಿಕರಗಳು ಹೀಗೆ ವೈವಿಧ್ಯಗಳಿಂದ ಕೂಡಿದೆ.
"

ಇಂದಿನ ಮಕ್ಕಳಿಗೆ ಹಿಂದಿನ ಜನರ ಜೀವನದ ಅರಿವೇ ಇಲ್ಲ. ಮಂದರತಿ ಪ್ರದರ್ಶನದಲ್ಲಿರುವ ಹಳೆಯ ಪರಿಕರಗಳು ಹಳ್ಳಿ ಬದುಕಿನ ಚಿತ್ರಣ ತೆರೆದಿಡುತ್ತದೆ. ಗ್ರಾಮೀಣ ಜನರ ಬದುಕು ಎಷ್ಟು ಕಷ್ಟದಿಂದ ಕೂಡಿತ್ತು ಎಂಬ ಜ್ಞಾನವೂ ಲಭಿಸುತ್ತದೆ. ಯುವಸಮುದಾಯಕ್ಕೆ ಇದು ಪ್ರಾಕ್ಟಿಕಲ್​ ಕ್ಲಾಸ್​ನ ಅನುಭವ ನೀಡಲಿದೆ.

— ಉಷಾಲತಾ ಶೆಟ್ಟಿ. ದೈಹಿಕ ಶಿಕ್ಷಕಿ, ಹೆಬ್ರಿ
ಮಂದರತಿ ಪ್ರಾಚ್ಯ ವಸ್ತು ಪ್ರದರ್ಶನದಲ್ಲಿರುವ ಹಳೆಯ ಪರಿಕರ.

"

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಉಡುಪಿಗೆ ಬಂದಿದ್ದೆ. ಇಲ್ಲಿ ಶಿಕ್ಷಕ ಶ್ರೀನಿವಾಸ ಅವರ ಪ್ರಾಚ್ಯ ವಸ್ತು ಪ್ರದರ್ಶನ ಕಂಡು ಸಂತಸಗೊಂಡೆ. ಮಕ್ಕಳಿಗಷ್ಟೇ ಅಲ್ಲ, ಈಗಿನ ಹಿರಿಯರಿಗೂ ಸಹ ಹಿಂದಿನವರ ಜೀವನ ಶೈಲಿ, ಬದುಕಿದ ರೀತಿ ತಿಳಿದುಬರುತ್ತದೆ. ಅವರ ಸಾಧನೆ, ಶ್ರಮ, ಉದ್ದೇಶ ನಿಜಕ್ಕೂ ಅರ್ಥಪೂರ್ಣ.

— ಎಲ್​.ಐ. ಲಕ್ಕಮ್ಮನವರ್​. ಧಾರವಾಡದ ಶಿಕ್ಷಕ.
"

ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಇಂದಿನ ಆಧುನಿಕ ವಸ್ತುಗಳನ್ನು ಕಂಡು ನನ್ನ ಅಜ್ಜಿ ಹಳೆಯ ಪರಿಕರಗಳ ಬಗ್ಗೆ ಮಾತನಾಡುತ್ತಿದ್ದರು. ಹೀಗಾಗಿ ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೂ ತಲುಪಿಸಲು, ತಿಳಿಸಲು ಪ್ರದರ್ಶನ ನೀಡುತ್ತಿದ್ದೇನೆ.

— ಶ್ರೀನಿವಾಸ ದೇವಾಡಿಗ. ಪ್ರದರ್ಶನ ಆಯೋಜಿಸುವ ಶಿಕ್ಷಕ.