ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಗ್ರಾಮೀಣ ಕ್ರೀಡಾ ಸ್ಪರ್ಧೆ ಉದ್ಘಾಟಿಸಿದರು.  
ಉಡುಪಿ

ಹೊರಾಂಗಣ ಕ್ರೀಡೆಗೆ ಮಕ್ಕಳು ತೆರೆದುಕೊಳ್ಳಲಿ: ಕಾಣಿಯೂರು ಶ್ರೀ

ಉಡುಪಿ: ಇಂದಿನ ಮಕ್ಕಳು ಮೊಬೈಲ್​ನಲ್ಲೇ ಆಟ ಆಡುವುದನ್ನು ಬಿಟ್ಟು ಹೊರಾಂಗಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಸೂರ್ಯನ ಬಿಸಿಲಿನ ಕಾರಣಕ್ಕೆ ಆರೋಗ್ಯವೂ ವೃದ್ಧಿಯಾಗುತ್ತದೆ. ಜೊತೆಗೆ ಆಟೋಟ ಸ್ಪರ್ಧೆಗಳಿಂದ ಪರಸ್ಪರ ಸ್ನೇಹ ಬೆಳೆಯುತ್ತದೆ ಎಂದು ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಮಲ್ಪೆ ಕಡಲತೀರದಲ್ಲಿ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ "ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಅಧ್ಯಯನದಿಂದ ಮನಸ್ಸಿಗೆ ಹಾಗೂ ಕ್ರೀಡೆಯಿಂದ ದೇಹಕ್ಕೆ ಶಕ್ತಿ ಬರುತ್ತದೆ. ಮನುಷ್ಯನಿಗೆ ಬೌದ್ಧಿಕ ಹಾಗೂ ದೈಹಿಕ ಬಲ ಎರಡೂ ಅಗತ್ಯವಾಗಿದ್ದು, ಇದರಿಂದ ಸಮತೋಲಿತ ಬದುಕು ಕಟ್ಟಿಕೊಳ್ಳಬಹುದು ಎಂದರು.
ಸಂಸತ ಮಹಾವಿದ್ಯಾಲಯದ ಜ್ಯೋತಿಷ್ಯ ಪ್ರಾಧ್ಯಾಪಕ ಡಾ. ದೇರೇಬೈಲು ಶಿವಪ್ರಸಾದ್​ ತಂತ್ರಿ, ವಿಶ್ವ ದೇವಾಡಿಗ ಮಹಾ ಮಂಡಲದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು, ತೋಟದ ಪಂಡರೀನಾಥ ಭಕ್ತಿ ಉದಯ ಭಜನಾ ಮಂದಿರದ ಅಧ್ಯಕ್ಷ ದಯೇಶ್​, ದಶಾ ಮಹಾಬಲ, ವಿಶಾಲ್ಯು, ವಸೇವ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್​ ಶೆಟ್ಟಿ, ಸಂದೀಪ್​ ಕುಮಾರ್​, ಯೋಗೀಶ್​ ಸಾಲ್ಯಾನ್​ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಗೋವಿಂದರಾಜ್​ ಸ್ವಾಗತಿಸಿದರು. ವೈಭವ್​ ಕೊಡವೂರು ವಂದಿಸಿದರು. ವಿಜಯ ಕುಮಾರ್​ ಕೊಡವೂರು ನಿರೂಪಿಸಿದರು.

ಕಡಲ ತೀರದಲ್ಲಿ ಗ್ರಾಮೀಣ ಕ್ರೀಡೆಗಳ ಆಕರ್ಷಣೆ
ಕುಂಟೋಬಿಲ್ಲೆ, ಚೀಲ ಓಟ (ಗೋಣಿ ಚೀಲ ಓಟ), ಮೂರು ಕಾಲಿನ ಓಟ ಹಾಗೂ ಮೂರು ಜನರ ಓಟದಂತಹ ರೋಚಕ ಸ್ಪರ್ಧೆಗಳಲ್ಲಿ ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು. ಪೀಲಿ ಚಂಡು, ಗಿಡ ಆಟ, ಲಗೋರಿ, ಕಬಡ್ಡಿ , ಹಗ್ಗ ಜಗ್ಗಾಟ ಸ್ಪರ್ಧೆಗಳು ಗಮನಸೆಳೆದವು.