ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ. 
ಉಡುಪಿ

ಖರ್ಗೆ ವರ್ತನೆ ಕಾಂಗ್ರೆಸ್​ನ ಹೀನ ಮನಸ್ಥಿತಿಗೆ ಕೈಗನ್ನಡಿ

* ಉಡುಪಿ ಶಾಸಕ ಯಶಪಾಲ್​ ಸುವರ್ಣ ಆಕ್ರೋಶ

* ಪ್ರಧಾನಿ ಮೋದಿ ತಂದೆಯ ಪ್ರಸ್ತಾಪಕ್ಕೆ ಅಸಮಾಧಾನ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಕುರಿತು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಕೀಳುಮಟ್ಟದ ಹೇಳಿಕೆ ಆ ಪಕ್ಷದ ಹೀನ ಮನಸ್ಥಿತಿಗೆ ಕೈಗನ್ನಡಿಯಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಅಗಲಿದ ವ್ಯಕ್ತಿಯ ಕುರಿತು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಟೀಕೆ ವಿಚಾರಗಳಿಗಷ್ಟೇ ಸೀಮಿತವಾಗಿರಬೇಕು. ಕಾಂಗ್ರೆಸ್​ ರಾಷ್ಟ್ರೀಯ ಪಕ್ಷವಾಗಿದ್ದು ಅದರ ಅಧ್ಯಕ್ಷರಾಗಿ ಹಾಗೂ ರಾಜಕೀಯದಲ್ಲಿ ಹಿರಿಯ ನಾಯಕರಾಗಿರುವ ಖರ್ಗೆ ಅವರಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ಷಮೆ ಯಾಚಿಸಿ

ಮೋದಿ ಅವರು ರಾಜಕೀಯವಾಗಿ ವಿರೋಧಿಗಳಾಗಿರಬಹುದು. ಆದರೆ, ವೈಯಕ್ತಿಕ ಗೌರವದ ಗಡಿ ದಾಟುವುದು ಯಾರ ಘನತೆಗೂ ತಕ್ಕುದಲ್ಲ. ಪ್ರಧಾನಿ ಮೋದಿ ಅವರ ದಿವಂಗತ ತಂದೆಯ ಬಗ್ಗೆ ಹಗುರವಾಗಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಯಾಚಿಸಬೇಕು. ಅವರ ಪಕ್ಷಕ್ಕೆ ಕಿಂಚಿತ್ತಾದರೂ ನೈತಿಕತೆಯಿದ್ದರೆ ರ್ಖಗೆಯವರನ್ನು ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಿಂದ ತಕ್ಷಣ ವಜಾ ಮಾಡಬೇಕು ಎಂದು ಯಶ್​ಪಾಲ್​ ಸುವರ್ಣ ಆಗ್ರಹಿಸಿದ್ದಾರೆ.