ಉಡುಪಿ: ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಸರ್ಕಾರ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು - ಮಕ್ಕಳ ಸಾಹಿತಿ ಇಂದಿರಾ ಹಾಲಂಬಿ -ಹೇಳಿದರು.
ಸಂಸತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಆಶ್ರಯದಲ್ಲಿ ನೀಡಿದ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಆದರೆ ಜನರು ಸುಖಿಗಳಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ. ಆದರೆ ಇಂದು 1ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲಾಗುತ್ತದೆ. ಬುದ್ಧಿವಂತ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸುತ್ತಾರೆ. ಸಾಧಾರಣ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕಬ್ಬಿಣದ ಕಡೆಲೆಯಂತಾಗಿ ಗಲಿಬಿಲಿಗೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಹಿನ್ನಡೆಯಾಗಿದೆ ಎಂದು ಖೇದವ್ಯಕ್ತಪಡಿಸಿದರು.
ವಿಶ್ವಸಾಹಿತ್ಯ ಪುರಸ್ಕಾರ ಪಡೆದ ಸಾಹಿತಿ ಡಾ. ಬೈರಮಂಗಲ ರಾಮೇಗೌಡ -, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶಿಷ್ಟಾಚಾರ ಅಧಿಕಾರಿ, ಲೇಖಕ ಜಯಪ್ರಕಾಶ್ ಪುತ್ತೂರು ಮಾತನಾಡಿದರು. ನಾಡೋಜ ಪ್ರೊ. ಕೆ. ಪಿ. ರಾವ್ ಸಭಾಧ್ಯಕ್ಷತೆ ವಹಿಸಿದ್ದರು, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ. ನಿರಂಜನ ಚೋಳಯ್ಯ, ಉದ್ಯಮಿ ವಿಶ್ವನಾಥ ಶೆಣೈ, ವಿಶ್ವಸಂಸತಿ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ವಿಜಯಕುಮಾರ್, ಸಂಧ್ಯಾ ಶೆಣೈ ಉಪಸ್ಥಿತರಿದ್ದರು.
ಪ್ರತಿಷ್ಠಾನ ಸಂಚಾಲಕ ರವಿರಾಜ್ ಎಚ್.ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಜನಾರ್ದನ್ ಸ್ವಾಗತಿಸಿದರು. ರಾಜೇಶ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು.