ಉಡುಪಿ: ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸಂವಿಧಾನದ ಬಗ್ಗೆ ಹಾಗೂ ಸಂಸದೀಯ ವ್ಯವಸ್ಥೆ ತಿಳಿಸುವ ಉದ್ದೇಶದಿಂದ ಯುವ ಸಂಸತ್ ಅಧಿವೇಶನ ಆಯೋಜಿಸಲಾಗುತ್ತಿದೆ. ಅದನ್ನು ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಿ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಜಿಲ್ಲಾ ಮಟ್ಟದ ಯುವ ಸಂಸತ್ ಸಭೆ ಆಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದೇಶದ ಸಂವಿಧಾನದ ಪ್ರಕಾರ ಸರ್ಕಾರದ ಕಾರ್ಯ ನಡೆಯುತ್ತಿವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳೇ ತಮ್ಮ ಪ್ರಭುಗಳನ್ನು ಆಯ್ಕೆ ಮಾಡಿ ಸರ್ಕಾರ ನಡೆಸಲು ಅನುವು ಮಾಡಿಕೊಡಲಾಗಿದೆ. ಜನಸಾಮಾನ್ಯರ ಆಶೋತ್ತರಗಳನ್ನು ನೆರವೇರಿಸಲು ಸಂಸತ್ನಲ್ಲಿ ಕಾರ್ಯ ಕಲಾಪ ಹೇಗೆ ಮತ್ತು ಚರ್ಚೆ ನಡೆದು ಅನುಷ್ಠಾನಗೊಳಿಸಲಾಗುತ್ತದೆ ಎಂಬ ಬಗ್ಗೆ ಯುವ ಸಮುದಾಯಕ್ಕೆ ತಿಳಿಸಿಕೊಡಬೇಕಿದೆ. ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಯುವ ಸಂಸತ್ ಸಭೆ ನಡೆಯಲಿದ್ದು, ತಾಲೂಕಿನಲ್ಲಿ ಆಯ್ದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದರು.
ಅತ್ಯುತ್ತಮವಾಗಿ ಚರ್ಚೆಯಲ್ಲಿ ಪಾಲ್ಗೊಂಡ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ, ನ.3ರ ಒಳಗೆ ರಾಜ್ಯ ಮಟ್ಟದ ಯುವ ಸಂಸತ್ ಸಭೆಗೆ ಕಳುಹಿಸಿಕೊಡಬೇಕು. ಸಭೆಗಳನ್ನು ಜಿಲ್ಲಾ ವಕೀಲರ ಸಂಘದ ಸಮನ್ವಯದೊಂದಿಗೆ ಆಯೋಜಿಸಬೇಕು. ಜಿಲ್ಲಾ ಮಟ್ಟದ ಸಭೆಗೆ ದಿನ ನಿಗದಿಸಿ, ಸೂಕ್ತ ಸ್ಥಳ ಆಯ್ಕೆ ಮಾಡಿ, ಸಭೆಯಲ್ಲಿ ಚರ್ಚಿಸಲಾಗುವ ವಿಷಯಗಳ ಬಗ್ಗೆ ಮೊದಲೇ ವಿದ್ಯಾರ್ಥಿಗಳಿಗೆ ತಿಳಿಸಿರಬೇಕು. ರಾಜ್ಯ ವಿಧಾನಸಭೆಯ ಮಾದರಿಯಲ್ಲಿ ಯುವ ಸಂಸತ್ ಸಭೆ ಆಯೋಜಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರೊನಾಲ್ಡ್ ಪ್ರವೀಣಕುಮಾರ್, ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಯುವ ಸಂಸತ್ ಅಧಿವೇಶನವನ್ನು ಬೆಳಗ್ಗೆ 10 ಗಂಟೆಗೆ ನಾಡಗೀತೆಯೊಂದಿಗೆ ಆರಂಭಿಸಬೇಕು. ಪೀಠಿಕೆ ವಾಚನ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆ, ತುರ್ತು ವಿಷಯದ ಚರ್ಚೆ, ವಿಧೇಯಕಗಳ ಮಂಡನೆ, ವಿಧೇಯಕಗಳ ಮೇಲಿನ ಚರ್ಚೆ, ಅವುಗಳ ಅಂಗೀಕಾರ, ಅರ್ನಿದಿಷ್ಟ ಅವಧಿಗೆ ಸಭೆ ಮುಂದೂಡಿಕೆ, ರಾಷ್ಟ್ರಗೀತೆ ಪ್ರಸಾರ ಒಳಗೊಂಡಿರುವಂತೆ ವ್ಯವಸ್ಥೆ ಮಾಡಬೇಕು.ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.