ಮುಖ್ಯಮಂತ್ರಿ ವಿ.ಡಿ.ಸತೀಶನ್ ಪ್ರತಿಕೃತಿ ದಹಿಸಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿತು. ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ವೀಣಾ ಅರುಣ್ ಶೆಟ್ಟಿ ಇತರರು ಇದ್ದರು.
ಕಾಸರಗೋಡು: ಧಾರ್ಮಿಕ ಮುಖಂಡ ಕಾಂತಾಪುರಂ ಮಹಿಳಾ ವಿರೋಧಿ ನಿಲುವು ಖಂಡಿಸಿ ನೀಡಿದ್ದ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆದುಕೊಂಡಿರುವ ಕ್ರಮವನ್ನು ಖಂಡಿಸಿ ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮುಖ್ಯಮಂತ್ರಿ ವಿ.ಡಿ.ಸತೀಶನ್ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನೆ ನಡೆಯಿತು.
ಕಾಸರಗೋಡು ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಪ್ರಮೀಳಾ ಮಜಲ್ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿ, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರಗತಿ ಸಾಧಿಸುತ್ತಿರುವ ಈ ಕಾಲಘಟ್ಟದಲ್ಲಿ ಅವರ ಸ್ವಾತಂತ್ರೃ ಮತ್ತು ಹಕ್ಕುಗಳನ್ನು ಪ್ರಶ್ನಿಸುವ ಧಾರ್ಮಿಕ ಮುಖಂಡರ ಹೇಳಿಕೆ ಸ್ಪಷ್ಟವಾಗಿ ಮಹಿಳಾ ವಿರೋಧಿಯಾಗಿದೆ.
ಸಾರ್ವಜನಿಕ ಸಮಾರಂಭಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ವಿರೋಧಿಸಿದ್ದರು. ಇದನ್ನು ಖಂಡಿಸಿದ್ದ ವಿ.ಡಿ.ಸತೀಶನ್ ಕ್ಷಣಾರ್ಧದಲ್ಲಿ ತಮ್ಮ ಹೇಳಿಕೆ ಹಿಂಪಡೆದುಕೊಳ್ಳುವ ಮೂಲಕ ತಮ್ಮ ತುಷ್ಟೀಕರಣ ನೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲನ್, ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ಆರ್.ನಾಯಕ್, ಜಿಲ್ಲಾ ಕಾರ್ಯದರ್ಶಿ ಮಮತಾ ಸಾಗರ್, ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷೆ ಶ್ರೀವಿದ್ಯಾ, ಚೇತನಾ ಮತ್ತು ಶ್ರುತಿ, ಜನಪ್ರತಿನಿಧಿಗಳು ಹಾಗೂ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.