ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಉಡುಪಿ

ನ.19ರಿಂದ ಮಣಿಪಾಲ ಕೆಎಂಸಿ ಗ್ರೀನ್ಸ್​ನಲ್ಲಿ ಮಾಹೆ ಘಟಿಕೋತ್ಸವ

ಉಡುಪಿ: ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಮಾಹೆ) 34ನೇ ಘಟಿಕೋತ್ಸವ ನವೆಂಬರ್​ 19ರಿಂದ 22ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್​ನಲ್ಲಿ ನಡೆಯಲಿದ್ದು, ಈ ಬಾರಿ ಒಟ್ಟು 7,694 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ಇವರಲ್ಲಿ 207 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್​ (ಪಿಎಚ್​ಡಿ) ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮದಿನ ಟಿಕೋತ್ಸವದಲ್ಲಿ ಮಾಹೆ ಹಳೆ ವಿದ್ಯಾರ್ಥಿ ಹಾಗೂ ಕೋನೆ ಎಲಿವೇಟರ್​ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಮಿತ್​ ಗೋಸೈನ್​, ನ.20ರಂದು ಹಿಟಾಚಿ ಸಿಸ್ಟಮ್ಸ್​ ಇಂಡಿಯಾದ ನಿರ್ದೇಶಕ ಹಾಗೂ ಮುಖ್ಯ ಪರಿವರ್ತನಾ ಅಧಿಕಾರಿ ಕೊಜಿ ತ್ಸುಬೋಟಾ, ನ.21ರಂದು ಬ್ರಿಟನ್​ನ ಲ್ಯಾಂಕಸ್ಟರ್​ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಔದ್ಯಮಿಕ ವಿಭಾಗದ ಸಹಕುಲಪತಿ ಪ್ರೊ. ಜೋ ರ್ಯಾಕಾಫ್ಟ್​-ಮಲೋನ್​ ಹಾಗೂ ನ.22ರಂದು ಕೆನಡಾದ ನ್ಯೂಬ್ರನ್ಸ್​ವಿಕ್​ ವಿಶ್ವವಿದ್ಯಾಲಯದ ಅಧ್ಯಕ್ಷೆ ಮತ್ತು ಕುಲಪತಿ ಡಾ. ಕ್ಯಾಥಿ ವಿಲ್ಸನ್​ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮಾಹೆ ಕುಲಪತಿ ಡಾ. ಶರತ್​ ಕೆ. ರಾವ್​ ಮಾತನಾಡಿ, ಬೆಂಗಳೂರು ಕ್ಯಾಂಪಸ್​ನಲ್ಲಿ ನ. 28 ಮತ್ತು 29ರಂದು ನಡೆಯುವ ಘಟಿಕೋತ್ಸವದಲ್ಲಿ 2,583 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಮೊದಲ ದಿನದ ಕಾರ್ಯಕ್ರಮದಲ್ಲಿ ಸಿಸ್ಕೋ ಇಂಡಿಯಾ ಮತ್ತು ಸಾರ್ಕ್​ನ ಸಾರ್ವಜನಿಕ ವಲಯ ಹಾಗೂ ವಾಣಿಜ್ಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ತ್ರೀದಿಬ್​ ರಾಯ್​ ಮತ್ತು ನ.29ರಂದು ಫಿಲಿಪ್ಸ್​ ಇಂಡಿಯಾ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್​ ಆರ್​. ಶೇಷ ಮುಖ್ಯ ಅತಿಥಿಗಳಾಗಿರಲಿದ್ದಾರೆ ಎಂದರು.

ಮಾಹೆಯು ಕೇಂದ್ರ ಸರ್ಕಾರದಿಂದ ಇನ್​ಸ್ಟಿಟ್ಯೂಶನ್​ ಆಫ್​ ಎಮಿನೆನ್ಸ್​ ಮಾನ್ಯತೆ ಪಡೆದ ವಿಶ್ವವಿದ್ಯಾಲಯವಾಗಿದ್ದು, ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್​ಶೆಡ್​ಪುರ ಮತ್ತು ದುಬೈ ಕ್ಯಾಂಪಸ್​ಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ವಿಜ್ಞಾನ, ವೈದ್ಯಕಿಯ, ಆಡಳಿತ, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ, ತಂತ್ರಜ್ಞಾನ ಹಾಗೂ ವಿಜ್ಞಾನ ಸೇರಿದಂತೆ 400ಕ್ಕೂ ಹೆಚ್ಚು ವಿಶೇಷ ಅಧ್ಯಯನ ವಿಭಾಗಗಳನ್ನು ಹೊಂದಿದೆ ಎಂದರು.

ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಾ. ಆನಂದ್​ ವೇಣುಗೋಪಾಲ್​, ಸಹ-ಕುಲಪತಿ ಮೇಜರ್​ ಜನರಲ್​ (ಡಾ.) ಮ್ಯಾಥ್ಯೂಸ್​ ಜೇಕಬ್​, ಕುಲಸಚಿವ ಡಾ. ಪಿ. ಗಿರಿಧರ್​ ಕಿಣಿ, ಕುಲಸಚಿವ ಡಾ. ಸಂದೀಪ್​ ಎಸ್​. ಶೆಣೈ ಉಪಸ್ಥಿತರಿದ್ದರು.