ಉಡುಪಿಯ ರಾಜಾಂಗಣದಲ್ಲಿ ಶ್ರೀಕೃಷ್ಣ-ಶಿವಲಿಂಗಕ್ಕೆ ಪೂಜೆ ಮಾಡುವ ಮೂಲಕ ಮಹಾಶಿವರಾತ್ರಿ ಜಾಗರಣೆಯ ಆಚರಣೆಗೆ ವೇದವರ್ಧನ ಶ್ರೀ ಚಾಲನೆ ನೀಡಿದರು.
* ಶೀರೂರು ವೇದವರ್ಧನ ತೀರ್ಥ ಆಶೀರ್ವಚನ
* ಕೃಷ್ಣ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಆಚರಣೆ
ಉಡುಪಿ: ಶ್ರೀಕೃಷ್ಣನಿರುವ ಉಡುಪಿಯನ್ನು ಶಿವಳ್ಳಿ ಪ್ರಾಂತ್ಯ ಎಂದೂ ಇಲ್ಲಿನ ಜನರನ್ನು ಶಿವಳ್ಳಿಗರು ಎಂದೇ ಕರೆಯುತ್ತಾರೆ. ಊರಿನ ಹೆಸರಲ್ಲೇ ಶಿವನಿದ್ದಾನೆ. ಶಿವನು ವಿಷ್ಣುವಿನ ಪರಮ ಭಕ್ತನಾಗಿದ್ದು, ವೈಷ್ಣವರಿಗೆಲ್ಲ ಶಿವನೇ ನಾಯಕನಾಗಿದ್ದಾನೆ. ರುದ್ರನ ಆರಾಧನೆಯಿಂದ ವಿಶೇಷ ಜ್ಞಾನ ಲಭ್ಯವಾಗುತ್ತದೆ. ಬುದ್ಧಿ ಹಾಗೂ ವಿದ್ಯೆಗೋಸ್ಕರ ರುದ್ರನಾದ ಶಿವನನ್ನು ಪೂಜಿಸಬೇಕು, ಆರಾಧಿಸಬೇಕು ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶೀರೂರು ಮಠದಿಂದ ಭಾನುವಾರ (ಫೆ.15) ಸಂಜೆ ಆಯೋಜಿಸಿದ್ದ ವೈಭವದ ಮಹಾಶಿವರಾತ್ರಿ ಆಚರಣೆ ನಿಮಿತ್ತ ವೇದಘೋಷದೊಂದಿಗೆ ಶಿವ-ಕೃಷ್ಣನಿಗೆ ಹೂವು, ಬಿಲ್ವಪತ್ರೆ, ತುಳಸಿಯಿಂದ ಪೂಜಿಸಿ, ಮಹಾಮಂಗಳರಾತಿ ಬೆಳಗಿ ಬಳಿಕ ಆಶೀರ್ವಚನ ನೀಡಿದರು.
ವರ ನೀಡುವ ಕರುಣಾಮಯಿ
ಇಂದು ರುದ್ರನದೇ ದಿನವಾಗಿದ್ದು, ತುಂಬ ಅಭಿಮುಖನಾಗಿರುತ್ತಾನೆ. ಭಕ್ತರು ಕೇಳಿದ್ದನ್ನೆಲ್ಲ ಬಲು ಬೇಗ ವರವಾಗಿ ಕರುಣಿಸುವ ಕರುಣಾಮಯಿ ಆಗಿದ್ದಾನೆ. ಹೀಗಾಗಿ ಜಾಗರಣೆ ಮೂಲಕ ಶಿವನನ್ನು ಆರಾಧಿಸಬೇಕು. ಶ್ರೀಕೃಷ್ಣನು ಸವೋರ್ತ್ತಮನಾಗಿದ್ದರಿಂದ ರುದ್ರನ ಪೂಜೆಯೊಂದಿಗೆ ಶಿವನ ಅಂತರಾತ್ಮದಲ್ಲಿರುವ ಭಗವಂತನನ್ನೂ ಪೂಜಿಸಬೇಕು ಎಂದು ವೇದವರ್ಧನ ಶ್ರೀ ತಿಳಿಸಿದರು.
ಗಮನ ಸೆಳೆದ ಶಿವಲಿಂಗ, ರಂಗೋಲಿ
ಶಿವರಾತ್ರಿ ಹಿನ್ನೆಲೆಯಲ್ಲಿ ರಾಜಾಂಗಣದಲ್ಲಿ ಶಿವ ದರ್ಶನದೊಂದಿಗೆ ಜಾಗರಣೆ, ಶಿವಧ್ಯಾನ, ರುದ್ರ ಪಠಣೆ ಮಾಡಲು ಬೃಹತ್ ಶಿವಲಿಂಗ ಇಡಲಾಗಿತ್ತು. ಶಿವಲಿಂಗದ ಮುಂಭಾಗದಲ್ಲಿ ಅಶ್ವತ್ಥ ಭಾರಧ್ವಾಜ್ ಅವರು ಬಗೆಬಗೆಯ ಹೂಗಳಲ್ಲಿ ಸುಂದರವಾದ ಮಂಡಳ ರಚಿಸಿದ್ದರು. ಶಿವಲಿಂಗದ ಮುಂಭಾಗದಲ್ಲಿ ರಂಗೋಲಿ ಕಲಾವಿದೆ ವೀಣಾ ಐತಾಳ್ ಅವರು ರಂಗೋಲಿಯನ್ನು ಶಿವನ ಭಾವಚಿತ್ರ ರಚಿಸುವ ಮೂಲಕ ಭಕ್ತಿಗೆ ಇನ್ನಷ್ಟು ಕಿಚ್ಚು ಹೆಚ್ಚಿಸಿದರು.
ಮಠದ ದಿವಾನ ವಿದ್ವಾನ್ ಡಾ. ಉದಯಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು. ಸಗ್ರಿ ಆನಂದ ತೀರ್ಥ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.
ಜಯರಾಂ ಆಚಾರ್ಯ, ಸಂದೀಪ್ ಮಂಜ, ವಿಷ್ಣುಪ್ರಸಾದ್ ಪಾಡಿಗಾರ್, ರವೀಂದ್ರ ಆಚಾರ್ಯ, ಶಿಲ್ಪಾ ಜೋಶಿ, ಶ್ರೀರಾಮ ಆಚಾರ್ಯ, ರುಪತಿ ರಾವ್ ಸಹಕರಿಸಿದರು.
ರಾತ್ರಿಯಿಡೀ ಜಾಗರಣೆ, ಶಿವನ ಧ್ಯಾನ
ಸಂಜೆ 6:30ರಿಂದ ವಿದ್ವಾನ್ ಲಕ್ಷ್ಮೀಶ್ ಮುದರಂಗಡಿ ಅವರಿಂದ ಪ್ರವಚನ, ಸಂಜೆ 7ರಿಂದ ಬೆಂಗಳೂರಿನ ಕ್ಷಿತಿಜಾ ಕಾಸರವಳ್ಳಿ ಮತ್ತು ಬಳಗದಿಂದ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ವಿದ್ವಾನ್ ಹೆರ್ಗ ರವೀಂದ್ರ ಭಟ್ ಅವರಿಂದ ಪ್ರವಚನ ನಡೆಯಿತು. ರಾತ್ರಿ 11 ಗಂಟೆಗೆ ರುದ್ರ ಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ, ರಾತ್ರಿ 12:30ರಿಂದ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಮತ್ತು ಬಳಗದಿಂದ ಕುಳಿತು ಭಜನೆ ನಡೆಯಿತು. ಸೋಮವಾರ (ಫೆ.16) ಪ್ರಾತ;ಕಾಲ 2:30ರಿಂದ ಮರ್ಣೆಯ ಭಜನಾ ಮಂಡಳಿಯಿಂದ ಕುಣಿತ ಭಜನೆ, ನಸುಕಿನ 4 ಗಂಟೆಗೆ ರುದ್ರ ಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ನೆರವೇರಿತು. ರಾತ್ರಿಯಿಂದ ಬೆಳಗ್ಗಿನವರೆಗೆ ಜಾಗರಣೆ, ಶಿವನ ಧ್ಯಾನ ನಡೆಯಿತು.