ಉಡುಪಿಯ ರಾಜಾಂಗಣದಲ್ಲಿ ಶಿವರಾತ್ರಿ ಜಾಗರಣೆಗಾಗಿ ಪರ್ಯಾಯ ಶೀರೂರು ವೇದವರ್ಧನ ಶ್ರೀಗಳು ಎಳ್ಳು ಗಂಟು ದೀಪ ಬೆಳಗಿದರು. ಡಾ.ಉದಯಕುಮಾರ್ ಸರಳತ್ತಾಯ ಇತರರಿದ್ದರು.
* ಉಡುಪಿ ಕೃಷ್ಣ ಮಠದಲ್ಲಿ ಶಿವರಾತ್ರಿ ಆಚರಣೆ
* ನಟರಾಜನಿಗೆ ರಂಗಪೂಜೆ, ಕುಣಿತ ಭಜನೆ
ಉಡುಪಿ: ಮಹಾಶಿವರಾತ್ರಿ ನಿಮಿತ್ತ ಜಿಲ್ಲೆಯ ವಿವಿಧ ಶಿವ ಮಂದಿರಗಳಲ್ಲಿ ಭಾನುವಾರ (ಫೆ.15) ರಾತ್ರಿಯಿಂದ ಸೋಮವಾರ (ಫೆ.16)ದ ಬೆಳಗಿನವರೆಗೆ ಭಕ್ತರು ಜಾಗರಣೆ ನಡೆಸಿದರು. ದಿನವಿಡಿ ನಾಮ ಸ್ಮರಣೆ, ಭಜನೆಯೊಂದಿಗೆ ತ್ರಿನೇತ್ರನಾದ ಶಿವನನ್ನು ಆರಾಧಿಸಿದರು.
ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶಿವರಾತ್ರಿ ಆಚರಿಸಲಾಯಿತು. ರಾಜಾಂಗಣದಲ್ಲಿ ಜಾಗರಣೆಗಾಗಿ ಎಳ್ಳು ಗಂಟು ದೀಪ ಬೆಳಗಿ, ಸಮಸ್ತ ಲೋಕಕ್ಕೆ ಒಳಿತಾಗುವಂತೆ ಪ್ರಾರ್ಥಿಸಿದರು.
ಹೆರ್ಗ ರವೀಂದ್ರ ಭಟ್ ಹಾಗೂ ಕಲ್ಯ ಅಶೋಕ ಆಚಾರ್ಯ ಅವರು ಶಿವರಾತ್ರಿ ಮಹಿಮೆ ಹಾಗೂ ಆಚರಣೆಯ ಮಹತ್ವಗಳ ಕುರಿತು ಪ್ರವಚನ ನೀಡಿದರು. ಬೆಂಗಳೂರಿನ ಕ್ಷಿತಿಜಾ ಬಳಗದಿಂದ ಯಕ್ಷಗಾನ-ಭರತನಾಟ್ಯದ ಜುಗಲ್ಬಂಧಿ ನೃತ್ಯ, ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಹಾಗೂ ಬಳಗದವರಿಂದ 'ಶಿವ ಸಂಗೀತ' ಕಾರ್ಯಕ್ರಮ, ಶ್ರೀಕಾಂತ್ ನಾಯಕ್ ಹಾಗೂ ತಂಡದಿಂದ ಭಜನಾ ಕಾರ್ಯಕ್ರಮ, ವಿವಿಧ ಸಂಘಗಳ ಸದಸ್ಯರಿಂದ ರುದ್ರ ಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.
ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಸಂದೀಪ್ ಮಂಜ, ಯುವ ಬ್ರಾಹ್ಮಣ ಪರಿಷತ್ನ ಅಧ್ಯಕ್ಷ ರಘುಪತಿ ರಾವ್, ಮಾಜಿ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರ್, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ನ ಸದಸ್ಯರು, ಸದಸ್ಯೆಯರು, ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಅಧ್ಯಕ್ಷ ಜಯರಾಮ ಆಚಾರ್ಯ, ಅಶ್ವತ್ಥ ಭಾರದ್ವಾಜ್, ಶೀರೂರು ಮಠದ ವಿದ್ವಾಂಸ ಸುದರ್ಶನ್ ಆಚಾರ್ಯ, ಪಾರುಪತ್ತೆಗಾರ ಶ್ರೀಶ ಭಟ್, ಸಗ್ರಿ ಆನಂದ ತೀರ್ಥ ಆಚಾರ್ಯ, ರವೀಂದ್ರ ಆಚಾರ್ಯ ಇತರರು ಇದ್ದರು.
ಶ್ರೀಗಳ ಉಪಸ್ಥಿತಿಯಲ್ಲಿ ರಂಗಪೂಜೆ
ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ವಿಶೇಷ ರಂಗಪೂಜೆ ನೆರವೇರಿಸಲಾಯಿತು. ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಯತಿಕುಲ ಚಕ್ರವರ್ತಿ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ ಇತರರಿದ್ದರು.
ಮಹಾ ಶಿವರಾತ್ರಿ ಉತ್ಸವದ ಪ್ರಯುಕ್ತ ಅನಂತೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಧ್ವಜಾರೋಹಣ ಸಮಾರಂಭ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿತು.