ವಿಜಯವಾಣಿ ಸುದ್ದಿಜಾಲ ಕಾರ್ಕಳ
ಫೆಬ್ರವರಿ 18ರಿಂದ ಹತ್ತು ದಿನಗಳ ಕಾಲ ಜರುಗಲಿರುವ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಒಂದು ಸಮಾಜದ ಹಬ್ಬವಾಗಿರದೆ, ಇಡೀ ಕಾರ್ಕಳದ ಜನತೆಯ ಹಬ್ಬವಾಗಬೇಕು ಎಂದು ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಫೆಬ್ರವರಿಯಲ್ಲಿ ನಡೆಯಲಿರುವ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಅಂಗವಾಗಿ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಪೂರ್ವಭಾವಿಯಾಗಿ ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಮುನಿ ಮಹಾರಾಜರು ಒಂದು ದಿನದ ಮಸ್ತಕಾಭಿಷೇಕದ ಜವಾಬ್ದಾರಿ ವಹಿಸಿಕೊಂಡಿದ್ದು, ಸಂಜೆ ಅಭಿಷೇಕಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಕೇವಲ 123 ದಿನಗಳು ಮಾತ್ರ ಬಾಕಿ ಇದ್ದು, ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದರೆ ಮಾತ್ರ ಈ ಧರ್ಮ ಕಾರ್ಯ ಯಶಸ್ವಿಯಾಗಲು ಸಾಧ್ಯ ಎಂದರು.
ಕಾರ್ಕಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿದರು. ಮಹಾಮಸ್ತಕಾಭಿಷೇಕ ಸಮಿತಿ ಉಪಾಧ್ಯಕ್ಷರಾದ ರತ್ನಾಕರ್ ರಾಜ್ ಅರಸ್ ಪಡುಬಿದ್ರಿ, ಅನಂತ್ರಾಜ್ ಪುವಣಿ ಹಾಗೂ ಕೋಶಾಧಿಕಾರಿ ಮೋಹನ್ ಪಡಿವಾಳ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ಯೋಗರಾಜ್ ಶಾಸ್ತ್ರಿ ನಿರೂಪಿಸಿದರು.
ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಆರೋಗ್ಯಕ್ಕಾಗಿ ಸಮಸ್ತ ಜೈನ ಸಮಾಜದ ವತಿಯಿಂದ ಜೈನಮಠದಲ್ಲಿ ಪೂಜೆ, ಪ್ರಾರ್ಥನೆ ನೆರವೇರಿಸಿ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಮುನಿ ಮಹಾರಾಜರ ಆಶೀರ್ವಾದದೊಂದಿಗೆ ರಾಜೇಂದ್ರ ಕುಮಾರ್ ಅವರಿಗೆ ಪ್ರಸಾದ ನೀಡಲಾಯಿತು. ಶ್ರೀ ಕ್ಷೇತ್ರ ಜೈನ ಮಠದ ಶ್ರೀ ಕೂಷ್ಮಾಂಡಿನೀ ದೇವಿಗೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಭಗವಂತ ನನಗೆ ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸಲು ನಾಲ್ಕನೇ ಬಾರಿಗೆ ಅವಕಾಶ ಕರುಣಿಸಿದ್ದಾನೆ. ಮಸ್ತಕಾಭಿಷೇಕ ಮಹೋತ್ಸವಕ್ಕೆ ಈಗಾಗಲೇ ಅಟ್ಟಲಿಗೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು, ಕೆಲಸಗಳು ಆರಂಭಗೊಂಡಿವೆ. ಉತ್ಸವದಲ್ಲಿ ಲೈಟಿಂಗ್, ಊಟ-ತಿಂಡಿ ಸೇರಿದಂತೆ ಯಾವುದೇ ವ್ಯವಸ್ಥೆಯಲ್ಲಿ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ರಸ್ತೆ ಅಭಿವೃದ್ಧಿಗೂ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು, ಹೆಚ್ಚಿನ ಅನುದಾನಕ್ಕಾಗಿ ಮನವಿ ಮಾಡಲಾಗಿದೆ. ಶಾಸಕರು ವಿಶೇಷ ಕಾಳಜಿ ವಹಿಸಿದ್ದು, ಸರ್ಕಾರದಿಂದ ಹೆಚ್ಚಿನ ವ್ಯವಸ್ಥೆಗಳು ಕಲ್ಪಿಸಿಕೊಡುವ ಭರವಸೆಯಿದೆ.ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕಾರ್ಯಾಧ್ಯಕ್ಷ, ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ
ಮಹಾಮಸ್ತಕಾಭಿಷೇಕದಂತಹ ಪುಣ್ಯ ಕಾರ್ಯವನ್ನು ನೆರವೇರಿಸಲು ರಾಜೇಂದ್ರ ಕುಮಾರ್ ಅವರಿಗೆ ಅನುಗ್ರಹ ದೊರಕಿದೆ. ಅನಾರೋಗ್ಯದಿಂದ ಚೇತರಿಸಿಕೊಂಡು ಮತ್ತೆ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಪುಣ್ಯಾತ್ಮರು ಹಾಗೂ ಧರ್ಮಾತ್ಮರನ್ನು ದೇವರು ಕಾಪಾಡುತ್ತಾನೆ. ರಾಜೇಂದ್ರ ಕುಮಾರ್ ಅವರಲ್ಲಿ ನಾಯಕತ್ವದ ಗುಣವಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಗೊಳಿಸಬೇಕು.ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಕಳ ಜೈನಮಠ